Advertisement

ಮಕ್ಕಳ ತಪ್ಪು ತಪ್ಪಲ್ಲ, ಶಿಕ್ಷೆ ಶಿಕ್ಷೆಯಲ್ಲ: ಸಂವಾದದಲ್ಲಿ ಮಕ್ಕಳ ರಕ್ಷಣಾ ಆಯೋಗದ ಶಂಕರಪ್ಪ

01:25 AM Jun 18, 2022 | Team Udayavani |

ಮಂಗಳೂರು: ಮಕ್ಕಳ ರಕ್ಷಣೆ ಕಾನೂನಿನ ಪ್ರಕಾರ ಮಕ್ಕಳ ತಪ್ಪು ತಪ್ಪಾಗಿರುವುದಿಲ್ಲ, ಶಿಕ್ಷೆ ಶಿಕ್ಷೆಯಲ್ಲ. ಈ ಎಲ್ಲ ವ್ಯವಸ್ಥೆಗಳೂ ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ. ಶಂಕರಪ್ಪ ಹೇಳಿದರು.

Advertisement

ಮಕ್ಕಳ ಸಮಸ್ಯೆಗಳ ಬಗ್ಗೆ ಅರಿತು ಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಅಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳೊಂದಿಗೆ ಸಂವಾದದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳಿಂದಲೇ ಮಾಹಿತಿ
ಆಯೋಗದ ಬಳ್ಳಾರಿ ವಲಯದ ಸದಸ್ಯ ಎಚ್‌.ಸಿ. ರಾಘವೇಂದ್ರ ಮಾತನಾಡಿ, ಕೋವಿಡ್‌ ಸಂದರ್ಭ ದೇಶದಲ್ಲಿ 3 ಕೋಟಿಗೂ ಅಧಿಕ ಮಕ್ಕಳು ಶಾಲೆ ತೊರೆದಿದ್ದಾರೆ. ವಸತಿ ವಂಚಿತರಾಗಿದ್ದಾರೆ, ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರು ಎದುರಿಸುತ್ತಿರುವ ತೊಂದರೆಗಳನ್ನು ಅವರಿಂದಲೇ ಅರಿಯಲು ಸಂವಾದ ಆಯೋಜಿಸಲಾಗಿದೆ ಎಂದರು.

ಪೊಲೀಸರ ಬಗ್ಗೆ ತಪ್ಪು ಕಲ್ಪನೆ ಬೇಡ
ಮಂಗಳೂರು (ಡಿಸಿಪಿ ಅಪರಾಧ ಮತ್ತು ಸಂಚಾರ) ಬಿ.ಪಿ. ದಿನೇಶ್‌ ಕುಮಾರ್‌ ಮಾತನಾಡಿ, ಪೊಲೀಸರೆಂದರೆ ಕೆಟ್ಟವರು ಎಂಬ ಭಾವನೆ ಸರಿಯಲ್ಲ. ಮಕ್ಕಳ ವಿಚಾರಣೆ ಸಂದರ್ಭ ಪೊಲೀಸರು ಸಿವಿಲ್‌ ಡ್ರೆಸ್‌ನಲ್ಲಿ ಇರುತ್ತಾರೆ. ಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ಮಂಗಳೂರಿನ ಮಹಿಳಾ ಠಾಣೆ ಬಳಿ ಇರುವ ಸಖೀ ವನ್‌ ಸ್ಟಾಪ್‌ ಸೆಂಟರ್‌ಗೆ ಮಾಹಿತಿ ನೀಡಬಹುದು ಎಂದರು.

ಮಕ್ಕಳ ಹಕ್ಕುಗಳನ್ನು ರಕ್ಷಿಸಿ
ದ.ಕ. ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಉದ್ಘಾಟಿಸಿ ಮಾತನಾಡಿ, ಬಾಲ್ಯದ ನೆನಪುಗಳು ಯಾವತ್ತೂ ಸಿಹಿಯಾಗಿರಬೇಕು. ಜೀವನ, ಶಿಕ್ಷಣ,
ಬೆಳವಣಿಗೆ, ರಕ್ಷಣೆ, ಆಟ, ದುಡಿಮೆ ಯಿಂದ ಹೊರಗಿರುವುದು ಅವರ ಹಕ್ಕುಗಳಾಗಿವೆ. ಈ ಎಲ್ಲ ಹಕ್ಕುಗಳನ್ನು ಖಾತ್ರಿಪಡಿಸಬೇಕು ಎಂದರು.

Advertisement

ಆಯೋಗದ ಸದಸ್ಯ ಪರಶುರಾಮ್‌, ಡಿಡಿಪಿಐ ಸುಧಾಕರ್‌, ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌, ಎಂಡೋಸಲ್ಫಾ ನ್‌ ಪೀಡಿತರ ಪುನರ್ವಸತಿ ನೋಡಲ್‌ ಅಧಿ ಕಾರಿ ಡಾ| ನವೀನ್‌ಚಂದ್ರ ಕುಲಾಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪ ಬೋವಿ, ಪುತ್ತೂರು ಡಿವೈಎಸ್‌ಪಿ ಗಾನಾ ಪಿ. ಕುಮಾರ್‌, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿ’ಸೋಜಾ, ಮೈಸೂರು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಕೆ.ವಿ., ಶಾಂತಿ ಸಂದೇಶ ಟ್ರಸ್ಟ್‌ ನಿರ್ದೇಶಕಿ ದುಲ್ಸಿನ್‌, ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಯಮುನಾ ಉಪಸ್ಥಿತರಿದ್ದರು.

ಸ್ಯಾನಿಟರಿ ಪ್ಯಾಡ್‌,
ಕಬ್ಬಿಣಾಂಶ ಮಾತ್ರೆ ಬರುತ್ತಿಲ್ಲ
ಸಂವಾದದ ವೇಳೆ ವಸತಿ ಶಾಲೆಯ ಹೆಣ್ಣುಮಕ್ಕಳಿಗೆ “ಶುಚಿ’ ಸ್ಯಾನಿಟರಿ ಪ್ಯಾಡ್‌ ಲಭ್ಯವಾಗದೆ ತಿಂಗಳಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿತು. ಈ ಕುರಿತು ಗಮನ ಹರಿಸಬೇಕು, ಸರಕಾರದ ಮಟ್ಟದಲ್ಲಿ ತಾನೂ ಮಾತನಾಡುವುದಾಗಿ ಸದಸ್ಯ ಶಂಕರಪ್ಪ ತಿಳಿಸಿದರು. ಪಠ್ಯಪುಸ್ತಕ ಬಂದಿಲ್ಲ, ಕಬ್ಬಿಣಾಂಶದ ಮಾತ್ರೆ ವಿತರಣೆ ಆಗುತ್ತಿಲ್ಲ, ಶಾಲೆ, ವಸತಿ ನಿಲಯದ ಆವರಣ ಗೋಡೆ ಎತ್ತರಿಸಬೇಕು ಮುಂತಾದ ಸಮಸ್ಯೆಗಳನ್ನು ಮಕ್ಕಳು ಗಮನಕ್ಕೆ ತಂದರು.

ಉಚಿತ ಬಸ್‌ಪಾಸ್‌:
ಕಂಡಕ್ಟರ್‌ಗೆ ಕೋಪ!
ಉಚಿತ ಬಸ್‌ಪಾಸ್‌ ಹಿಡಿದು ಬಸ್‌ ಹತ್ತಿದರೆ ನಿರ್ವಾಹಕರು ನಿಂದಿಸುತ್ತಾರೆ, ಕೆಲವೊಮ್ಮೆ ಬಸ್‌ನಿಂದ ಇಳಿಸುತ್ತಾರೆ ಎಂದು ಕುತ್ತಾರು ಬಾಲಸಂರಕ್ಷಣ ಕೇಂದ್ರದ ಬಾಲಕಿ ಹೇಳಿದರು. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದರು.

ಆನ್‌ಲೈನ್‌ ಶಿಕ್ಷಣದಿಂದ ಮಕ್ಕಳು ಮೊಬೈಲ್‌ ಗೇಮ್ಸ್‌ ಚಟಕ್ಕೆ ಒಳಗಾಗಿದ್ದಾರೆ. ಅದರಿಂದ ಹೊರತರಲು ಕ್ರಮ ಕೈಗೊಳ್ಳಬೇಕು ಎಂದು ಸುಳ್ಯದ ವಿದ್ಯಾರ್ಥಿಯೊಬ್ಬರು ಗಮನ ಸೆಳೆದರು. ಜಿಲ್ಲೆಯಲ್ಲಿ ಮೊಬೈಲ್‌ ಡಿ ಅಡಿಕ್ಷನ್‌ ಸೆಂಟರ್‌ ಆರಂಭ ಸಹಿತ, ಮಕ್ಕಳ ಕುರಿತಾದ ಎಲ್ಲ ಬೇಡಿಕೆಗಳ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಆಯೋಗದ ಸದಸ್ಯ ಶಂಕರಪ್ಪ ಅವರು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ಸೂಚಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next