Advertisement

ಮಕ್ಕಳಲ್ಲಿ ಮೊಬೈಲ್‌ ಗೀಳು; ಅನಾಹುತಗಳು ತಂದಿಟ್ಟ ಆತಂಕ

01:28 AM Feb 01, 2023 | Team Udayavani |

ಮಂಗಳೂರು: ಕೊರೊನಾ ಸಂದರ್ಭದ ಆನ್‌ಲೈನ್‌ ತರಗತಿ, ವಿವಿಧ ರೀತಿಯ ಕುತೂಹಲ ಹೆಚ್ಚಳ, ಸುಲಭವಾಗಿ ಮೊಬೈಲ್‌ ಕೈಗೆ ಸಿಗುತ್ತಿರುವುದು ಮೊದಲಾದ ಕಾರಣಗಳಿಂದಾಗಿ ಇಂದು ಚಿಕ್ಕ ಮಕ್ಕಳೂ ಮೊಬೈಲ್‌, ಇಂಟರ್‌ನೆಟ್‌ನ್ನು ಅತಿಯಾಗಿ ಬಳಸುತ್ತಿದ್ದಾರೆ. ಅನೇಕ ಮಕ್ಕಳಿಗೆ ಇದೊಂದು ಚಟವಾಗಿದೆ. ಆದರೆ ಇದನ್ನು ತಡೆಯಲು ಬಲವಂತದ ಕ್ರಮ ಅನುಸರಿಸಿದರೆ ಅನಾಹುತವಾಗಬಹುದು. ಮೊಬೈಲ್‌ ಬಳಕೆಯನ್ನು ತಡೆಯುವ ಜತೆಗೆ ಮಕ್ಕಳು ಮೊಬೈಲ್‌ನ್ನು ಹೇಗೆ, ಎಷ್ಟು ಬಳಸಬೇಕು ಎಂಬ ತಿಳಿವಳಿಕೆ ಹೆತ್ತವರಿಗೆ ಬೇಕು ಎನ್ನುತ್ತಾರೆ ಮಕ್ಕಳ ಮಾನಸಿಕ ಆರೋಗ್ಯ ತಜ್ಞರು.

Advertisement

ಸಮಸ್ಯೆ ಇದೆ ಎಂಬ ಅರಿವು ಹೆತ್ತವರಿಗೆ ತಿಳಿಯಬೇಕು. ಇದೊಂದು ಚಟ, ವ್ಯಸನ. ಇದನ್ನು ನಿರ್ಲಕ್ಷಿಸಬಾರದು. ಊಟ, ನಿದ್ದೆ ಸರಿಯಾಗಿ ಮಾಡದಿರುವುದು, ಮನೆಯವರ ಜತೆಯೂ ಸರಿಯಾಗಿ ಬೆರೆಯ ದಿರುವುದು, ಏಕಾಂಗಿತನ ಬಯಸುವುದು, ದಿನದ ಹೆಚ್ಚಿನ ಹೊತ್ತು ಒತ್ತಡದಲ್ಲಿರುವುದು ಇತ್ಯಾದಿ ಇದರ ಸಾಮಾನ್ಯ ಲಕ್ಷಣಗಳು ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞೆ ಡಾ| ರಮಿಳಾ ಶೇಖರ್‌.

ತಜ್ಞರ ಸಲಹೆಗಳು
– ಮಕ್ಕಳು ಕೋಣೆಯೊಳಗೆ ಬಾಗಿಲು ಹಾಕಿ ಮೊಬೈಲ್‌ ಬಳಸಲು ಅವಕಾಶ ನೀಡಬೇಡಿ.
– ಮಕ್ಕಳನ್ನು ರಕ್ಷಿಸಬೇಕಾದರೆ ಮೊಬೈಲ್‌ ಬಳಕೆ ಬಗ್ಗೆ ಹೆತ್ತವರೂ ತಿಳಿದುಕೊಳ್ಳಬೇಕು.
– ಮಕ್ಕಳು ಬಿಡುವಿನ ವೇಳೆ ಆಟ, ಇತರ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
– ಮಕ್ಕಳ ನಡವಳಿಕೆಯ ಮೇಲೆ ಸಂಶಯ ಬಂದ ಕೂಡಲೇ ತಜ್ಞರ ಸಲಹೆ ಪಡೆಯಬೇಕು.
– ಮೊಬೈಲ್‌ನ ಆ್ಯಪ್‌ ಅಕೌಂಟ್‌(ನಿಯಂತ್ರಣ ಕ್ರಮ)ಬಗ್ಗೆ ಮಕ್ಕಳು, ಹೆತ್ತವರು ತಿಳಿದುಕೊಳ್ಳಬೇಕು.
– ಸಾಧ್ಯವಾದಷ್ಟು ಮಕ್ಕಳು ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು.

ಸೈಬರ್‌ ಭದ್ರತಾ ತಜ್ಞರ ಸಲಹೆಗಳು
– ಗೂಗಲ್‌ ಫ್ಯಾಮಿಲಿ ಲಿಂಕ್‌ನಂತಹ ಆ್ಯಪ್‌ಗ್ಳನ್ನು ಅಳವಡಿಸಿಕೊಳ್ಳುವುದರಿಂದ ಮೊಬೈಲ್‌ನಲ್ಲಿ ಮಕ್ಕಳಿಗೆ ಅಗತ್ಯವಿರುವ, ಸಂಬಂಧಪಟ್ಟ ಸುರಕ್ಷಿತವಾದ ಲಿಂಕ್‌ ಮಾತ್ರ ಬ್ರೌಸ್‌ ಮಾಡಲು ಸಾಧ್ಯವಾಗುತ್ತದೆ.
– ಆ್ಯಪ್‌ಗ್ಳ ಇಎಸ್‌ಆರ್‌ಬಿ ರೇಟಿಂಗ್‌ ಪ್ರಕಾರ ಮಾತ್ರ ಆ್ಯಪ್‌ಗ್ಳನ್ನು ಬಳಕೆ ಮಾಡಬೇಕು.
– ಸ್ಕ್ರೀನ್‌ ಟೈಮ್‌ ಆ್ಯಪ್‌ಗ್ಳಾದ ಆಫ್ ಟೈಮ್‌, ಕ್ವಾಲಿಟಿ ಟೈಮ್‌, ಆ್ಯಂಟೈ ಸೋಶಿಯಲ್‌ ಆ್ಯಪ್‌ ಮೊದಲಾದವುಗಳು ಮೊಬೈಲ್‌ ಬಳಕೆಯ ಸಮಯವನ್ನು ಮಿತಿಗೊಳಿಸುತ್ತದೆ.

ಆಂಡ್ರಾಯ್ಡ ಮೊಬೈಲ್‌ಗ‌ಳು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿವೆ. ಕೆಲವು ಶಾಲೆಗಳು ಈಗಲೂ ಪಠ್ಯವನ್ನು ಮೊಬೈಲ್‌ನಲ್ಲೇ ಕಳುಹಿಸುತ್ತಾರೆ. ಸಂಗೀತ ತರಗತಿಗಳೂ ಮೊಬೈಲ್‌ನಲ್ಲಿ ನಡೆಯುತ್ತಿವೆ. ಹಾಗಾಗಿ ಹೆತ್ತವರು ಮಕ್ಕಳ ಮೊಬೈಲ್‌ ಬಳಕೆಗೆ ಅಡ್ಡಿ ಮಾಡುವುದಿಲ್ಲ. ಮೊಬೈಲ್‌ ಗೀಳಿನಿಂದಾಗಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಉಂಟಾಗುತ್ತಿದೆ. ಶೇ.30ರಷ್ಟು ಮಂದಿ ಹೆತ್ತವರಿಗೆ ಆ್ಯಂಡ್ರಾಯ್ಡ ಮೊಬೈಲ್‌ ಬಳಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸುಮಾರು ಶೇ.40ರಷ್ಟು ಮಂದಿ ಹೆತ್ತವರಿಗೆ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯದ ಕೊರತೆ ಇದೆ. ಮಕ್ಕಳಲ್ಲಿ ಸೋಶಿಯಲ್‌ ಕನೆಕ್ಟೆಡ್‌ನೆಸ್‌ ಕಡಿಮೆಯಾಗಿ ಸಣ್ಣ ಒತ್ತಡ, ಸಮಸ್ಯೆ ಬಂದರೂ ಅನಾಹುತ ಮಾಡಿಕೊಳ್ಳುತ್ತಾರೆ. ಮಕ್ಕಳು, ಹೆತ್ತವರಿಗೆ ಅರ್ಥ ಮಾಡಿಕೊಡಲು ಸೂಕ್ತ ಥೆರಪಿ ಕೂಡ ಅಗತ್ಯ.
– ಡಾ| ರಮಿಳಾ ಶೇಖರ್‌, ಕೌನ್ಸೆಲಿಂಗ್‌ ರಿಸರ್ಚ್‌ ಆ್ಯಂಡ್‌ ಟ್ರೈನಿಂಗ್‌ ಸೆಂಟರ್‌, ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ತಜ್ಞೆ,

Advertisement

ವೀಡಿಯೋಗೇಮ್ಸ್‌, ಲೈಕ್‌, ಶೇರ್‌ ಮೊದಲಾದ ಚಟುವಟಿಕೆಗಳು ಮಕ್ಕಳನ್ನು ಮತ್ತೆ ಮತ್ತೆ ಅಂತಹ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ. ಅವರು “ವಚುರ್ವಲ್‌ ವರ್ಲ್ಡ್’ನ್ನೇ ಇಷ್ಟ ಪಡುವಂತೆ ಮಾಡುತ್ತದೆ. ಅದೇ ಲೋಕದಲ್ಲಿ ಅವರು ಜೀವಿಸುವ ಅನುಭವ ಪಡೆಯುತ್ತಿರುತ್ತಾರೆ. ವಾಸ್ತವ ಪ್ರಪಂಚದಲ್ಲಿ (ಮನೆ, ಪರಿಸರ) ಅವರಿಗೆ ಬೇಡದ ಸಣ್ಣ ವ್ಯತ್ಯಾಸ, ತೊಂದರೆ ಅಥವಾ ಕಷ್ಟಗಳು ಎದುರಾದರೂ ಅನಾಹುತ ಮಾಡಿಕೊಳ್ಳುವ ಅಪಾಯವಿರುತ್ತದೆ.
– ಡಾ| ಅನಂತಪ್ರಭು, ಸೈಬರ್‌ ಭದ್ರತಾ ತಜ್ಞರು, ಮಂಗಳೂರು

– ಸಂತೋಷ್ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next