ದಾವಣಗೆರೆ: ಮಕ್ಕಳ ರಕ್ಷಣೆಯಲ್ಲಿ ಸಾರ್ವಜನಿಕರ ಸಹಕಾರ ಅವಶ್ಯಕ. ಅಂತೆಯೇ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ರೈಲ್ವೆ ರಕ್ಷಣಾದಳದ ಉಪನಿರೀಕ್ಷಕ ಎ. ಕೊಂಡಾರೆಡ್ಡಿ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ಕಲ್ಯಾಣ ಸಮಿತಿ, ರೈಲ್ವೆ ರಕ್ಷಣಾದಳ, ರೈಲ್ವೆ ಪೊಲೀಸ್ ಮತ್ತು ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್‌ಬಾಸ್ಕೋ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಹಾಯವಾಣಿ 1098 ಮಾಸಾಚರಣೆ ಹಾಗೂ ರೈಲು ಪ್ರಯಾಣಿಕರ ಸುರಕ್ಷತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು ಸಂಕಷ್ಟಗಳಿಗೆ ಸಿಲುಕುವ ಮುನ್ನ ಅವರು ಸುರಕ್ಷಿತರಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಂಜುನಾಥ ಮಾತನಾಡಿ, ಮಕ್ಕಳ ಸುರಕ್ಷತೆ-ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಅಭಿಯಾನ ಮಾಡುವ ಮೂಲಕ ಸಾಗಾಣಿಕೆಗೆ ಸಿಲುಕಿದ ಮಕ್ಕಳನ್ನು ಗುರುತಿಸಿ ರಕ್ಷಣೆ ಕಲ್ಪಿಸಬೇಕು ಎಂದರು. ರೈಲ್ವೆ ರಕ್ಷಣಾದಳದ ಸಹಾಯಕ ನಿರೀಕ್ಷಕಿ ಲಕ್ಷ್ಮೀ ಪಾಟೀಲ್ ಮಾತನಾಡಿ, ರೈಲ್ವೆ ಪ್ರಯಾಣದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದರು. ರೈಲ್ವೆ ರಕ್ಷಣಾದಳದ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ರೈಲ್ವೆ ಪ್ರಯಾಣಿಕರು ಸಹಾಯ ಪಡೆಯಬೇಕು ಎಂದರು.
ಮುಖ್ಯ ಟಿಕೆಟ್ ತಪಾಸಣಾಧಿಕಾರಿ ಜಿ.ಆರ್. ಶ್ರೀನಿವಾಸ್ ಮಾತನಾಡಿ, ರೈಲ್ವೆ ಇಲಾಖೆ ಅಧಿಕಾರಿಗಳು ಗುರುತಿಸಿದ ಸಂಕಷ್ಟದಲ್ಲಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಮಕ್ಕಳ ಸಹಾಯವಾಣಿ ತುಂಬ ಸಹಾಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮ ನಾಯ್ಕ, ಸ್ಟೇಷನ್ ಮಾಸ್ಟರ್ ಅಭಯ್‌ಕುಮಾರ್, ಶಂಕರ್ ವೈ., ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡದ ಕಾರ್ಯಕರ್ತರಾದ ರವಿ ಬಿ. ಮಂಜುನಾಥ, ಡಿ. ಮಂಜುಳ, ವಿ. ನಾಗರಾಜ್ ಟಿ., ತೆರೆದ ತಂಗುದಾಣ ಯೋಜನೆ ಸಂಯೋಜಕ ಎಚ್. ಸುನೀಲ್, ಕಾರ್ಯಕರ್ತರಾದ ಹೊನ್ನಪ್ಪ ಎಂ. ನಟರಾಜ್, ರೈಲ್ವೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಯೋಜಕ ಮಂಜಪ್ಪ ಬಿ., ದಿನೇಶ್ ಕೆ.ಎನ್. ಸ್ವಾಗತಿಸಿದರು. ಅರ್ಷದ್ ಅಲಿ ಟಿ.ಎ. ನಿರೂಪಿಸಿದರು. ಸ್ವಾಮಿ ಬಿ. ವಂದಿಸಿದರು.
ಸಂಕಷ್ಟದಲ್ಲಿರುವ ಮಕ್ಕಳ ನೆರವಿಗಾಗಿ ರಾಷ್ಟ್ರೀಯ ಉಚಿತ ಮಕ್ಕಳ ಸಹಾಯವಾಣಿ 1098ಸಂಖ್ಯೆಗೆ ಕರೆ ಮಾಡಿದರೆ ಮಕ್ಕಳ ನೆರವಿಗೆ ಧಾವಿಸಿ ಅವರಿಗೆ ಪೋಷಣೆ ಮತ್ತು ರಕ್ಷಣೆ ಕಲ್ಪಿಸಲಾಗುವುದು.
-ಕೊಟ್ರೇಶ್ ಟಿ.ಎಂ., ಮಕ್ಕಳ ಸಹಾಯವಾಣಿ ಕೊಲ್ಯಾಬ್ ಸಂಯೋಜಕ