ರಾಯಚೂರು: ಮಕ್ಕಳು ಎದುರಿಸುತ್ತಿರುವ ನಾನಾ ರೀತಿಯ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮಾಜದ ಪ್ರತಿ ನಾಗರಿಕನ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಜಯಶ್ರೀ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಕೋವಿಡ್ ವೇಳೆ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಕ್ಕಳೊಂದಿಗೆ ಸಂವಾದ ಹಾಗೂ ಪೋಕ್ಸೋ ಕಾಯ್ದೆ, ಆರ್‌ಟಿಇ ಕುರಿತು ಮಕ್ಕಳ ಅಹವಾಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಧಿಕಾರಿಗಳು ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಮಕ್ಕಳೇ ದೇಶದ ಭವಿಷ್ಯ. ಅವರ ಬಗ್ಗೆ ಅಧಿಕಾರಿಗಳು ವಿಶೇಷ ನಿಗಾ ವಹಿಸುವ ಅನಿವಾರ್ಯತೆ ಇದೆ. ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಉನ್ನತ ಹುದ್ದೆಗೆ ಏರುವಂತಹ ಕನಸುಗಳನ್ನು ಬಿತ್ತಬೇಕು. ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡಿ ಬೆಳೆಸಬೇಕಿದೆ ಎಂದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ (1098) ಕರೆ ಮಾಡುವ ಮೂಲಕ ಇಲಾಖೆ ಕಾರ್ಯಕ್ಕೆ ಕೈ ಜೋಡಿಸಬೇಕು. ಮಕ್ಕಳು ದೌರ್ಜನ್ಯಕ್ಕೊಳಗಾದಾಗ ತಕ್ಷಣ ಸಹಾಯವಾಣಿಗೆ ಕರೆ ಮಾಡಿ, ನಿಮಗೆ ಆಗುತ್ತಿರುವ ತೋದರೆಗಳ ಬಗ್ಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಿಲ್ಲೆಯ ವಿವಿಧ ತಾಲೂಕಿನ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶಾಲೆಯ ಶಿಕ್ಷಕರ ಕೊರತೆ, ಶೌಚಾಲಯ, ನೀರು ಹಾಗೂ ಮೂಲ ಸೌಲಭ್ಯಗಳ ಕುರಿತು ಗಮನ ಸೆಳೆದರು. ಅಲ್ಲದೇ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಆಗಮಿಸಿ ಬಾಲ ಕಾರ್ಮಿಕ, ಬಾಲ್ಯ ವಿವಾಹ ಹಾಗೂ ಶೈಕ್ಷಣಿಕ ಸಮಸ್ಯೆ ಕುರಿತು ದೂರು ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಗುಂಡೂರಾವ್, ಜಿಲ್ಲಾ ಶಸ್ತ್ರ ಚಿಕಿತ್ಸಕ ವಿಜಯ ಶಂಕರ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಕಾರಿ ಶೇಖ್ ಅಲಿ, ಜಿಲ್ಲಾ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ದತ್ತಾತ್ರೇಯ ಸೇರಿ ಇತರರಿದ್ದರು.