ಮಂಗಳೂರು: ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಮಾಜದಲ್ಲಿನ ಸರ್ವರ ಸಹಕಾರ ಅತ್ಯಗತ್ಯವಾಗಿದೆ. ಬಾಲ್ಯವಿವಾಹ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದ್ದರೂ ಇನ್ನೂ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾದಲ್ಲಿ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ತಿಳಿಸಿದ್ದಾರೆ.
ಕಾಯಿದೆಯಂತೆ ಬಾಲ್ಯವಿವಾಹ ಪ್ರಕರಣಗಳು ಸಾಬೀತಾದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ 2 ವರ್ಷದವರೆಗೆ ವಿಸ್ತರಿಸಬಹುದಾದ ಕಠಿನ ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ. 1 ಲಕ್ಷ ರೂ.ದಂಡವನ್ನು ವಿಧಿಸಲು ಸಾಧ್ಯವಿರುತ್ತದೆ. ಅಲ್ಲದೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಅವಕಾಶ ಇರುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಹೇಳಿದರು.
ಬಾಲ್ಯವಿವಾಹ ನಿಷೇಧದ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಶಿಬಿರಗಳನ್ನು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2011-12 ನೇ ಸಾಲಿನಿಂದ ಇದುವರೆಗೆ ಒಟ್ಟು 85 ಬಾಲ್ಯವಿವಾಹಗಳನ್ನು ತಡೆಹಿಡಿಯಲಾಗಿದೆ. 2016-17ನೇ ಸಾಲಿನಲ್ಲಿ 2 ಹಾಗೂ 2017-18 ನೇ ಸಾಲಿನಲ್ಲಿ 3 ಬಾಲ್ಯವಿವಾಹಗಳು ನಡೆದಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಪೊಲಿಸ್ ಠಾಣೆಯಲ್ಲಿ ಪ್ರವೀಣ್ ಅವರ ಮೇಲೆ, ಮೂಡಬಿದಿರೆ ಪೊಲಿಸ್ ಠಾಣೆಯಲ್ಲಿ ಲಕ್ಷ್ಮೀ ಸಂದೀಪ್ ಮೊಗೆರಾಯ, ಭಾಸ್ಕರ್, ಪ್ರೇಮಲತಾ, ಲಕ್ಷ್ಮೀನಾರಾಯಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರಾಮ್ ಅವ್‌ತಾರ್, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್, ಮಲ್ಲಿಕಪ್ಪ, ಜಯಮ್ಮ, ಪ್ರಭಾಕರ್ ರಾವ್, ಮೀನಾಕ್ಷಿ ಹಾಗೂ ಕೃಷ್ಣ ಮೂರ್ತಿ ಅವರ ಮೇಲೆ ಹಾಗೂ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಂಗಾರ ಮತ್ತು ಸಂದೇಶ ಅವರ ಮೇಲೆ ಈಗಾಗಲೇ ಎಫ್.ಐ.ಆರ್.ದಾಖಲಿಸಲಾಗಿದೆ. ಈ ಪ್ರಕರಣಗಳು ತನಿಖೆಯಲ್ಲಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧ ಸಮಿತಿಯು ಗ್ರಾ.ಪಂ. ಅಧ್ಯಕ್ಷತೆಯಲ್ಲಿದ್ದು ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ ನಿಯಂತ್ರಿಸುವ ಹೊಣೆಗಾರಿಕೆ ಈ ಸಮಿತಿಯದ್ದಾಗಿರುತ್ತದೆ. ಆದ್ದರಿಂದ ಬಾಲ್ಯವಿವಾಹವನ್ನು ತಡೆಗಟ್ಟಲು ಎಲ್ಲರೂ ಸನ್ನದ್ಧರಾಗಬೇಕಿದೆ. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗುವ ಎಲ್ಲರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.