Advertisement

ಪಂಚಾಯತ್‌ಗಳಿಗೆ ಶಾಲೆ ಬಿಟ್ಟ ಮಕ್ಕಳ ಹೊಣೆ!

09:55 AM Dec 17, 2019 | sudhir |

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ ಹೊರ ಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲಾ ಮುಖ್ಯವಾಹಿನಿಗೆ ಕರೆ ತರುವ ಹೊಣೆಗಾರಿಕೆಯನ್ನು “ಸ್ಥಳೀಯ ಸರಕಾರಗಳು’ ಆಗಿರುವ ಪಂಚಾಯತ್‌ಗಳಿಗೆ ವಹಿಸಲಾಗಿದೆ.

Advertisement

ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವುದರಿಂದ ಹೈಕೋರ್ಟ್‌ ನಿರ್ದೇಶನದ ಬಳಿಕ ಶಿಕ್ಷಣ ಇಲಾಖೆಯ ಮನವಿ ಮೇರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯು ಈ ಬಗ್ಗೆ ಪಂಚಾಯತ್‌ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅದರಂತೆ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ಮತ್ತು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳೊಡನೆ ಚರ್ಚಿಸಬೇಕು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪ್ರಾಥಮಿಕ ಶಾಲಾ ಶಿಕ್ಷಣದ ಸಾರ್ವತ್ರಿಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕ್ರಿಯಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.

ಸಂವಿಧಾನದ ಕಲಂ 23 (ಎ) ಪ್ರಕಾರ 6ರಿಂದ 14 ವರ್ಷದ ಮಕ್ಕಳು 8 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲ ಹಕ್ಕು ಆಗಿದೆ. ಅದೇ ರೀತಿ ಶಿಕ್ಷಣ ಹಕ್ಕು ಕಾಯ್ದೆ ಕಲಂ 32ರ ಪ್ರಕಾರ ಸ್ಥಳೀಯ ಸರಕಾರ (ಪಂಚಾಯತ್‌)ಗಳು ಶಾಲೆಯ ಮೂಲ ಸೌಕರ್ಯ, ಮಕ್ಕಳ ದಾಖಲಾತಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲಾ ಶಿಕ್ಷಣ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.

Advertisement

ಅದೇ ರೀತಿ ಕಾಯ್ದೆಯ ನಿಯಮ 9(ಡಿ) ಅನ್ವಯ ಗ್ರಾಮೀಣ ಭಾಗದಲ್ಲಿ ಪಂಚಾಯತ್‌ಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು “ವಿಲೇಜ್‌ ಎಜುಕೇಶನ್‌ ರಿಜಿಸ್ಟ್ರಾರ್‌’ ಮತ್ತು “ವಾರ್ಡ್‌ ಎಜುಕೇಶನ್‌ ರಿಜಿಸ್ಟ್ರಾರ್‌’ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತವೆ. ಸಂವಿಧಾನದ ಆಶಯ ಮತ್ತು ಕಾಯ್ದೆಯ ಅವಕಾಶಗಳಂತೆ ಪಂಚಾಯತ್‌ಗಳು ಈ ಜವಾಬ್ದಾರಿಗಳನ್ನು ನಿರ್ವಹಿಸದಿರುವ ಬಗ್ಗೆ ದಾಖಲಾಗಿರುವ ಅರ್ಜಿಯಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳು ಅವುಗಳ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ನಿರ್ದೇಶನ ನೀಡಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ನಿರ್ದೇಶ ನೀಡಿತ್ತು.

ಈ ಹಿನ್ನೆಲೆಯಲ್ಲಿ 2019ರ ನ.7ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಗ್ರಾಮೀಣ ಭಾಗದಲ್ಲಿ ಕಾರ್ಮಿಕರೊಡನೆ ವಲಸೆ ಬಂದ ಮಕ್ಕಳ ಗಣತಿ ನಡೆಸಿ ಅವರು ಶಾಲೆಗೆ ದಾಖಲಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಹ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ವಹಿಸಲಾಗಿದೆ.

ಈ ಮಧ್ಯೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರುವ ಜವಾಬ್ದಾರಿ ನಿರ್ವಹಿಸುವ ಕುರಿತಂತೆ ಪಂಚಾಯತ್‌ಗಳಿಗೆ ಸೂಕ್ತ ನಿರ್ದೇಶಗಳನ್ನು ನೀಡುವಂತೆ ಕೋರಿ ಶಿಕ್ಷಣ ಇಲಾಖೆ ಡಿ.10ರಂದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಅದನ್ನು ಉಲ್ಲೇಖೀಸಿ ಗ್ರಾಮೀಣಾಭಿವೃದ್ಧಿ ಇಲಾಖೆಯು ಡಿ.11ರಂದು ಎಲ್ಲ ಪಂಚಾಯತ್‌ಗಳಿಗೆ ಸುತ್ತೋಲೆ ಕಳಿಸಿದೆ.

70 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ?
ಶಿಕ್ಷಣ ಇಲಾಖೆಯು 2019ರ ಮಾರ್ಚ್‌ನಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ 2018ರ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 70,116 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗಿತ್ತು.

ಬಳಿಕ 2019ರ ಜುಲೈಯಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ 70,116 ಮಕ್ಕಳ ಪೈಕಿ 12,782 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದ್ದು, 57,334 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದರಲ್ಲಿ 6ರಿಂದ 14 ವರ್ಷದ ಮಕ್ಕಳ ಸಂಖ್ಯೆ 16,835 ಇದೆ ಎಂದು ತಿಳಿಸಲಾಗಿತ್ತು. ಸರಕಾರದ ಅಂಕಿ-ಅಂಶಗಳ ಪ್ರಕಾರ 2017-18ರಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 14 ಸಾವಿರ ಇತ್ತು. ಆದರೆ 2018-19ರಲ್ಲಿ ಈ ಸಂಖ್ಯೆ 70 ಸಾವಿರ ಆಯಿತು. ಇದರಲ್ಲಿ ಗ್ರಾಮೀಣ ಭಾಗದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ಕುರಿತ ವಸ್ತುಸ್ಥಿತಿ ವರದಿ ಡಿ.16ಕ್ಕೆ ಹೈಕೋರ್ಟ್‌ಗೆ ಸಲ್ಲಿಕೆಯಾಗಲಿದೆ.

–  ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next