Advertisement

ದೋಣಿ ಸ್ಥಗಿತಕ್ಕೆ ಮಕ್ಕಳ ಶಿಕ್ಷಣ ಕೂಡ ಸ್ಥಗಿತ..!

12:06 PM Nov 25, 2021 | Team Udayavani |

ಎಚ್‌.ಡಿ.ಕೋಟೆ: ತಾಲೂಕಿನ ಕೇರಳ ಗಡಿ ಭಾಗದ ಡಿ.ಬಿ.ಕುಪ್ಪೆಯಲ್ಲಿ ಕಪಿಲಾ ನದಿ ಮೂಲಕ ಜನರನ್ನು ದಾಟಿಸುತ್ತಿದ್ದ ದೋಣಿಗಳ ಸಂಚಾರ ಸ್ಥಗಿತಗೊಂಡ ಕಾರಣ ಶಿಕ್ಷಣ ಕ್ಕಾಗಿ ಕೇರಳಕ್ಕೆ ಹೋಗುತ್ತಿದ್ದ 25ಕ್ಕೂ ಅಧಿಕ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ತಾಲೂಕಿನ ಡಿ.ಬಿ.ಕುಪ್ಪೆ ಕೇರಳ- ಕರ್ನಾಟಕ ಗಡಿಭಾಗ.

Advertisement

ಕೇರಳದಿಂದ ಬಹುತೇಕ ಮಂದಿ ಇಲ್ಲಿಗೆ ಆಗಮಿಸಿ ನೆಲೆಯೂರಿದ್ದಾರೆ. ಕೋಟೆ ತಾಲೂಕಿನ ಗಡಿಯಲ್ಲಿ ನೆಲೆಯೂರಿದ್ದರೂ ಭವಿಷ್ಯದ ಹಿತದೃಷ್ಟಿಯಿಂದ ತಮ್ಮ ಮಕ್ಕಳಿಗೆ ಕೇರಳದಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸುತ್ತಿದ್ದಾರೆ. ಡಿ.ಬಿ.ಕುಪ್ಪೆ ಹಾಗೂ ಕೇರಳ ನಡುವೆ ಕಪಿಲಾ ನದಿ ಹರಿಯುತ್ತಿದ್ದು, ಡಿ.ಬಿ.ಕಪ್ಪೆಯಿಂದ ದೋಣಿ ಮೂಲಕ ಕೇವಲ 300 ಮೀಟರ್‌ ಹಾದು ಹೋದರೆ ಕೇರಳದ ಪೆರಿಯಕಲ್ಲೂರು ತಲುಪಬಹುದು.

ಹೀಗಾಗಿ ಡಿ.ಬಿ.ಕುಪ್ಪೆಯಲ್ಲಿ ನೆಲೆಸಿರುವ ಕೇರಳಿಗರು ಪ್ರತಿದಿನ ಮಕ್ಕಳನ್ನು ಕಲಿಕೆಗಾಗಿ ಪೆರಿಯಕಲ್ಲೂರಿಗೆ ಕಳುಹಿಸುವುದು ಹಾಗೂ ಸಾರ್ವಜನಿಕರೂ ಕೂಡ ದೋಣಿ ಮೂಲಕ ನದಿ ದಾಟಿ ಕೇರಳ ತಲುಪುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ, ಇತ್ತೀಚಿಗೆ ಕೇರಳದಲ್ಲಿ ಕೊರೊನಾ ಹಿನ್ನೆಲೆ‌ ದೋಣಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಸೋಂಕು ಕ್ಷೀಣಿಸಿರುವ ಕಾರಣ ದೋಣಿ ಸಂಚಾರ ಪುನಾರಂಭಿಸಬಹುದು.

ಆದರೆ, ದೋಣಿಗಳಿಗೆ ವಿಮೆ ವ್ಯವಸ್ಥೆ ಮಾಡಿಸಿಲ್ಲದ ಕಾರಣ ಸಂಚಾರಕ್ಕೆ ಅನುಮತಿ ನೀಡಿಲ್ಲ. ದೋಣಿಯಲ್ಲಿ ಶಾಲಾ ಮಕ್ಕಳನ್ನು ಕಪಿಲಾ ನದಿ ದಾಟಿಸುವ ದೋಣಿಗಳಿಗೆ ವಿಮೆಯೇ ಇಲ್ಲ, ನದಿ ದಾಟಿಸಬೇಕಾದ ದೋಣಿಗಳಿಗೆ ವಿಮೆ ಮಾಡಿಸ ಬೇಕು. ಇಲ್ಲದಿದ್ದರೆ ದೋಣಿ ಚಾಲನೆ ಮಾಡುವುದಕ್ಕೆ ಅನುಮತಿ ನೀಡಬಾರದೆಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ದೋಣಿಗಳ ಸಂಚಾರ ಸ್ಥಗಿತವಾಗಿದೆ. ಈ ನಡುವೆ ಶಾಲೆಗಳು ಶುರುವಾಗಿ ತಿಂಗಳುಗಳೇ ಉರುಳುತ್ತಿದ್ದರೂ 6ರಿಂದ 10ನೇ ತರಗತಿ ಕಲಿಕೆಗೆ ಕೇರಳಕ್ಕೆ ಹೋಗುತ್ತಿದ್ದ 25ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ:- ಬೆಲೆ ಏರಿದ್ರೂ ಕಾರ್ಮಿಕರ ದಿನಗೂಲಿ ಏರಿಲ್ಲ

Advertisement

ದೋಣಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. 300 ಮೀಟರ್‌ ನದಿ ದಾಟದೇ ಬದಲಿ ರಸ್ತೆ ಮಾರ್ಗವಾಗಿ ಪೆರಿಯಕಲ್ಲೂರಿಗೆ ಹೋಗಬೇಕಾದರೆ ಬರೋಬ್ಬರಿ 39 ಕಿ.ಮೀ. ಸಂಚರಿಸಬೇಕು. ಕಳೆದ 2 ವರ್ಷಗಳಿಂದ ಕೊರೊನಾ ಸೋಂಕಿನ ಭೀತಿಯಿಂದ ಮಕ್ಕಳು ಕಲಿಕೆಯಿಂದ ಹಿಂದೆ ಸರಿದಿದ್ದಾರೆ. ಈಗ ಮತ್ತೆ 1 ವರ್ಷ ಶಿಕ್ಷಣದಿಂದ ವಂಚಿತರಾಗುವುದು ಎಷ್ಟು ಸರಿ. ಈಗ ಪ್ರಯಾಣಿಕರನ್ನು ಸಾಗಿಸುವ ದೋಣಿಗಳಿಗೆ ವಿಮೆ ಇಲ್ಲ.

ಹೀಗಾಗಿ ಜೀವಕ್ಕೆ ರಕ್ಷಣೆ ಇಲ್ಲ ಎನ್ನುವುದಾದರೆ ಬಳ್ಳೆ, ಗುಂಡತ್ತೂರು ಹಾಗೂ ಉದೂºರು ಅರಣ್ಯ ಇಲಾಖೆಗೆ ಸೇರಿದ 3 ಬೋಟುಗಳು ಕೆಲಸವಿಲ್ಲದೇ ನಿಲುಗಡೆ ಮಾಡಲಾಗಿದೆ. ಅದೇ ದೋಣಿಗಳನ್ನು ಬೆಳಗ್ಗೆ ಮತ್ತು ಸಂಜೆ ಕಳುಹಿಸಿಕೊಟ್ಟರೆ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ. ಅಗತ್ಯ ಎನಿಸಿದರೆ ಪೋಷಕರು ಬೋಟ್‌ಗಳಿಗೆ ಇಂತಿಷ್ಟು ಹಣ ಪಾವತಿಸಲು ಕೂಡ ಸಿದ್ಧರಿದ್ದಾರೆ.

ಬೆಳಗ್ಗೆ, ಸಂಜೆ ಸಂಚರಿಸಲಿ: ಕಪಿಲಾ ನದಿ ದಾಟಿಸುವ ಎಲ್ಲಾ ದೋಣಿಗಳ ವಿಮೆ ಚಾಲನೆಯಲ್ಲಿಲ್ಲ, ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಕನಿಷ್ಠ ಪಕ್ಷ ಬೆಳಗ್ಗೆ ಮತ್ತು ಸಂಜೆ ಶಾಲೆ ವೇಳೆಗೆ ದೋಣಿ ಸಂಚಾರಕ್ಕೆ ಅನುವು ಮಾಡಿಕೊಡುವುದು ಒಳಿತು ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ತಿರುಪತಿ ತಿಳಿಸಿದ್ದಾರೆ.

 ದೋಣಿಗೆ ವಿಮೆ ಮಾಡಿಸಿ ಸಂಚರಿಸಲಿ: ತಹಶೀಲ್ದಾರ್‌ ಕಪಿಲಾ ನದಿ ದಾಟುವ ದೋಣಿಗಳಿಗೆ ವಿಮೆ ಇಲ್ಲ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ದೋಣಿಗಳಲ್ಲಿ ಸಾಗುವಾಗ ಅವಘಡ ಸಂಭವಿಸಿದರೆ ಪರಿಹಾರವೂ ದೊರೆಯುವುದಿಲ್ಲ ಎನ್ನುವ ಕಾರಣದಿಂದ ದೋಣಿಗಳಿಗೆ ವಿಮೆ ಮಾಡಿಸಿ ಸಂಚರಿಸಲಿ ಎಂದು ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ದೋಣಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್‌ ನರಗುಂದ್‌ ತಿಳಿಸಿದ್ದಾರೆ.

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next