ಕುಂಬಳೆ/ಬದಿಯಡ್ಕ: ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವಿಗೀಡಾದ ಸಹೋದರರಾದ ಇಬ್ಬರು ಮಕ್ಕಳ ರಕ್ತದ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗಾಗಿ ಪುಣೆಗೆ ಕಳುಹಿಸಲಾಗಿದೆ. ಸಾವಿಗೀಡಾದ ಮಕ್ಕಳ ಕನ್ಯಪ್ಪಾಡಿಯಲ್ಲಿರುವ ಮನೆಗೆ ಗುರುವಾರ ಬೆಳಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಕ್ಕಳಿಗೆ ನ್ಯುಮೋನಿಯಾ ತಗಲಿತ್ತು.
ಆದರೆ ಒಂದು ದಿನದೊಳಗೆ ಸಾವು ಸಂಭವಿಸಬಹುದಾದ ಜ್ವರ ಇದಲ್ಲ. ಅದ್ದರಿಂದ ಮಕ್ಕಳಿಗೆ ವೈರಾಣು ಜ್ವರ ತಗಲಿ ರಬಹುದೆಂದು ಶಂಕಿಸಲಾಗಿದೆ. ಮಕ್ಕಳ ಹೆತ್ತವರ ರಕ್ತ ಸ್ಯಾಂಪಲನ್ನು ಕೂಡ ಉನ್ನತ ಮಟ್ಟದ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಸಾವಿಗೆ ಕಾರಣವಾದ ಜ್ವರ ಯಾವುದೆಂದು ರಕ್ತ ಮಾದರಿಯ ವರದಿ ಬಂದ ಬಳಿಕವಷ್ಟೇ ತಿಳಿಯಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ಪಿ. ದಿನೇಶ್ ಕುಮಾರ್ ತಿಳಿಸಿದ್ದಾರೆ.
ಕನ್ಯಪ್ಪಾಡಿ ಪಳ್ಳಿಕಂಡ ನಿವಾಸಿ ಅಂಗಡಿಮೊಗರು ಶಾಲೆಯ ಅಧ್ಯಾಪಕ ಸಿದ್ಧಿಕ್ – ನಿಸಾ ದಂಪತಿಯ ಮಕ್ಕಳಾದ ಮೊದೀನ್ ಸಿನಾಸ್ (ನಾಲ್ಕೂವರೆ ವರ್ಷ), ಫಿದರತ್ತುಲ್ ಮುಂತಹಾನ್ (ಆರು ತಿಂಗಳು) ಜ್ವರದಿಂದ ಸಾವಿಗೀಡಾಗಿದ್ದರು. ಮಕ್ಕಳ ತಾಯಿ ಅಸರುನ್ನೀಸಾ ಅವರಿಗೆ ಜ್ವರ ಬಾಧಿಸಿದ್ದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಣ್ಣೀರ ಕೋಡಿ
ಹೆತ್ತವರಿಗೆ ಇಬ್ಬರೇ ಮಕ್ಕಳಿದ್ದು ಅವರಿಬ್ಬರನ್ನೂ ಕಳೆದುಕೊಂಡ ಕುಟುಂಬದಲ್ಲಿ ಕಣ್ಣೀರ ಕೋಡಿ ಹರಿದಿದೆ. ನೆರೆಯ 18 ವರ್ಷದ ಓರ್ವ ವ್ಯಕ್ತಿಯೂ ಜ್ವರದಿಂದ ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದು, ಪರಿಸರದ ಜನತೆ ಆತಂಕಕ್ಕೊಳಗಾಗಿದ್ದಾರೆ.
ಭಯ ಬೇಡ: ಸಚಿವೆ
ಸ್ಥಳಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ತಪಾಸಣೆ ನಡೆಸಲಾಗಿದೆ. ಆತಂಕ ಪಡುವಂತಹ ಯಾವುದೇ ಅಂಶಗಳು ಪತ್ತೆಯಾಗಿಲ್ಲ. ಆದರೂ ಸಂಪೂರ್ಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಸ್ಥಳೀಯರು ಈ ಕುರಿತು ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯವಿಲ್ಲ.
– ಕೆ.ಕೆ. ಶೈಲಜಾ ಟೀಚರ್, ರಾಜ್ಯ ಆರೋಗ್ಯ ಸಚಿವೆ