ತೆಕ್ಕಟ್ಟೆ (ಕನ್ನುಕೆರೆ): ಸಮಸ್ತ ಕನ್ನಡಿಗರ ಮನಸೂರೆಗೊಳ್ಳುತ್ತಿರುವ ಝೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ -2ಗೆ ಕುಂದಾಪುರ ತಾಲೂಕಿನ ಮರವಂತೆಯ ಶ್ರಾವ್ಯಾ ಎಸ್. ಆಚಾರ್(11) ರಾಜ್ಯದ ಮೂಲೆ ಮೂಲೆಯಿಂದ ಭಾಗವಹಿಸಿದ ಅದೆಷ್ಟೋ ಕಲಾ ಪ್ರತಿಭೆಯ ನಡುವೆ ಆಯ್ಕೆಗೊಂಡು ಇದೀಗ ಕರಾವಳಿಯ ಗಂಡು ಮೆಟ್ಟಿದ ಕಲೆ ಯಕ್ಷಗಾನದ ಅಭಿಮನ್ಯು ಪಾತ್ರವನ್ನು ಕಳೆದ ಶನಿವಾರ ಆರಂಭಗೊಂಡ ಎರಡನೆಯ ಸೀಸನ್‌ನಲ್ಲಿ ಅನಾವರಣಗೊಳಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ಜನಪ್ರಿಯ ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ಒಂದಾಗಿರುವ ಡ್ರಾಮಾ ಜೂನಿಯರ್ಸ್ – 2ಗೆ ರಾಜ್ಯದ ಅನೇಕ ಕಡೆಗಳಲ್ಲಿ ಆಡಿಷನ್‌ಗಳು ನಡೆದು ಸುಮಾರು 25 ಸಾವಿರಕ್ಕಿಂತಲೂ ಅಧಿಕ ಪುಟಾಣಿಗಳು ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ನಡೆಸಿದ ಆಡಿಶನ್‌ನಲ್ಲಿ ಆಯ್ಕೆಗೊಂಡ ಬಳಿಕ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಜರಗಿದ ಮೆಗಾ ಆಡಿಷನ್‌ನಲ್ಲಿಯೂ ಕೂಡಾ ತನ್ನ ವಿಭಿನ್ನ ಕಲಾ ಪ್ರಕಾರಗಳನ್ನು ಅಭಿವ್ಯಕ್ತಿಸಿ ಪದಕ ಗಳಿಸಿದ್ದಾಳೆ. ಪ್ರಸ್ತುತ ನಡೆಯುತ್ತಿರುವ ಡ್ರಾಮಾ ಜೂನಿಯರ್ಸ್ – 2 ರೆಕಾರ್ಡಿಂಗ್ ನಿರತರಾಗಿರುವ ಈ ಪ್ರತಿಭೆಗಳ ಮೇಲೆ ಹೆಚ್ಚಿನ ನಿರೀಕ್ಷೆಯಲ್ಲಿರುವ ವೀಕ್ಷಕರು ಅತ್ಯಂತ ಕಾತುರದಿಂದ ಕಾರ್ಯಕ್ರಮದ ವೀಕ್ಷಣೆಯನ್ನು ಕಾದು ಕುಳಿತಿದ್ದಾರೆ.
ಮನಸೆಳೆದ ಅಭಿಮನ್ಯು ಪಾತ್ರ: ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಕರಾವಳಿಯ ಗಂಡು ಕಲೆ ಯಕ್ಷಗಾನದ ಅಭಿಮನ್ಯು ಪಾತ್ರವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸುವ ಮೂಲಕ ತೀರ್ಪುಗಾರರನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ದಿದ್ದಾಳೆ.
ಬಹುಮುಖ ಪ್ರತಿಭೆ: ಕುಂದಾಪುರ ತಾಲೂಕಿನ ಮರವಂತೆಯ ಶಂಕರ ಆಚಾರ್ಯ ಹಾಗೂ ಗೀತಾ ಆಚಾರ್ಯ (ತೆಕ್ಕಟ್ಟೆ-ಕನ್ನುಕೆರೆ) ದಂಪತಿಯ ಪುತ್ರಿ ಶ್ರಾವ್ಯಾ ಎಸ್.ಆಚಾರ್ ತನ್ನ ಬಾಲ್ಯದಿಂದಲೇ ಚಿತ್ರಕಲೆ, ಭರತನಾಟ್ಯ ಹಾಗೂ ಯಕ್ಷಗಾನದಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಇವಳು ಝೀ ಕನ್ನಡದಲ್ಲಿ ಬರುವ ಗೃಹಲಕ್ಷ್ಮೀ ಹಾಗೂ ಸುವರ್ಣ ಕನ್ನಡದಲ್ಲಿನ ಸಿಂಧೂರ ಧಾರಾವಾಹಿ ಮತ್ತು ಕರುನಾಡ ಶಾಲೆ ಎನ್ನುವ ಕಲಾತ್ಮಕ ಕನ್ನಡ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾಳೆ. ಯೂ ಟ್ಯೂಬ್‌ನಲ್ಲಿ ಸ್ವಚ್ಛ ಭಾರತ್ ಹಾಗೂ ಧೂಮಪಾನ ವಿರೋಧಿ ಕಿರುಚಿತ್ರದಲ್ಲಿ ನಟಿಸಿರುವ ಈಕೆ ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪ್ರಸ್ತುತ ಬೆಂಗಳೂರಿನ ಪ್ರಾರ್ಥನಾ ಶಿಕ್ಷಣ ಸಂಸ್ಥೆಯಲ್ಲಿ ಆರನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಹಲವು ಸಂಘ ಸಂಸ್ಥೆಗಳು ನಡೆಸಿದ ವಿವಿಧ ಸ್ಪರ್ಧೆಯಲ್ಲಿ ಹಲವು ಬಹುಮಾನವನ್ನು ಗಳಿಸಿದ್ದಾಳೆ.
ಬಾಲ್ಯದಲ್ಲಿಯೇ ಕಲಾ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ತಳೆದಿರುವ ಶ್ರಾವ್ಯಾ ಎಸ್. ಆಚಾರ್ ಯಕ್ಷಗಾನವನ್ನು ಗುರುಗಳಾದ ಕೃಷ್ಣಮೂರ್ತಿ ತುಂಗ ಅವರಿಂದ ಕಳೆದ ಹಲವು ವರ್ಷಗಳಿಂದಲೂ ಯಕ್ಷ ತರಬೇತಿ ಪಡೆಯುತ್ತಿದ್ದು ಕಲೆಯಲ್ಲಿ ಸಾಧನೆ ಮಾಡಲು ಹೊರಟಿರುವ ಕುಂದಗನ್ನಡದ ಪ್ರತಿಭೆಗೆ ಎಲ್ಲರ ಪ್ರೋತ್ಸಾಹದ ಅಗತ್ಯವಿದೆ.
– ಶ್ರೀನಿವಾಸ ಆಚಾರ್ಯ ಕನ್ನುಕೆರೆ, ( ಸೋದರ ಮಾವ )
– ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ