ಶಹಜಹಾನ್‌ಪುರ: ಟ್ರಕ್ ಒಂದು ಢಿಕ್ಕಿ ಹೊಡೆದ ಬಳಿಕ ದ್ವಿಚಕ್ರ ವಾಹನವನ್ನು ಸುಮಾರು 500 ಮೀಟರ್‌ವರೆಗೆ ಎಳೆದೊಯ್ದ ಪರಿಣಾಮ ಮಗು ಸೇರಿದಂತೆ ಮೂವರು ದಾರುಣವಾಗಿ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಇಲ್ಲಿನ ಕತ್ರಾ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದ್ದು,ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್‌ಪುರ ಗ್ರಾಮದ ನಿವಾಸಿಗಳಾದ ರಾಮದೀನ್ (40), ಅವರ ಸೊಸೆ ಸುರ್ಜಾ ದೇವಿ (35) ಮತ್ತು ಮೂರು ವರ್ಷದ ಸೋದರಳಿಯ ತಮ್ಮ ಮನೆಗೆ ತೆರಳುತ್ತಿದ್ದಾಗ ಅವರ ಸ್ಕೂಟರ್‌ಗೆ ಹಿಂದಿನಿಂದ ಟ್ರಕ್ ಢಿಕ್ಕಿ ಹೊಡೆದಿದೆ. ಟ್ರಕ್‌ಗೆ ಸಿಕ್ಕಿಹಾಕಿಕೊಂಡು ಸ್ಕೂಟರ್ ಸುಮಾರು 500 ಮೀಟರ್‌ವರೆಗೆ ಎಳೆದೊಯ್ಯಲ್ಪಟ್ಟಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ನಂತರ ಪೊಲೀಸ್ ಸಿಬಂದಿ ಮೂವರನ್ನು ಬರೇಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಟ್ರಕ್ ಚಾಲಕ ತನ್ನ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.