ಚಿತ್ರದುರ್ಗ: ಸಾಹಿತ್ಯದ ಮೂಲಕ ದುರ್ಗದ ಇತಿಹಾಸವನ್ನು ನಾಡಿನೆಲ್ಲೆಡೆ ಪಸರಿಸಿದ ತರಾಸು ಜನ್ಮ ದಿನಾಚರಣೆಯನ್ನು ಸರ್ಕಾರಿ ಜಯಂತಿಯಾಗಿ ಆಚರಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ಕೆ. ನಾಗರಾಜ್ ಒತ್ತಾಯಿಸಿದರು.
ಸಾಹಿತಿ ತರಾಸು ಅವರ 101ನೇ ಜಯಂತಿ ಅಂಗವಾಗಿ ನಗರದ ಶ್ರೀಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಆವರಣದಲ್ಲಿರುವ ತರಾಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಐತಿಹಾಸಿಕ ಚಿತ್ರದುರ್ಗ ನಗರ ದೇವತೆಗಳಾದ ಏಕನಾಥೇಶ್ವರಿ, ಉಚ್ಚಂಗೆಲ್ಲಮ್ಮ, ಬರಗೇರಮ್ಮ, ತಿಪ್ಪಿನಘಟ್ಟಮ್ಮನವರ ಆಶೀರ್ವಾದ ತರಾಸುರವರ ಮೇಲಿದ್ದುದರಿಂದ ದುರ್ಗಾಸ್ತಮಾನದಂತಹ ಐತಿಹಾಸಿಕ ಕಾದಂಬರಿ ಬರೆದು ಮುಗಿಸಿದರು. ರಾಜ್ಯ ಸರ್ಕಾರ ಎಲ್ಲರ ಜಯಂತಿಗಳನ್ನು ಆಚರಿಸುತ್ತಿದೆ. ಅದೇ ರೀತಿ ತರಾಸು ಅವರಂತಹ ಮಹಾನ್ ಸಾಹಿತಿಯ ಜಯಂತಿಯನ್ನೂ ಆಚರಿಸಬೇಕೆಂದರು.
ಡಾ| ರಾಮಚಂದ್ರ ನಾಯಕ ಮಾತನಾಡಿ, ಐತಿಹಾಸಿಕ ಚಿತ್ರದುರ್ಗದಲ್ಲಿ ರಾಜವೀರ ಮದಕರಿ ನಾಯಕನ ಪ್ರತಿಮೆ ನಿರ್ಮಾಣವಾಗಬೇಕೆಂಬುದು ತರಾಸುರವರ ಕನಸಾಗಿತ್ತು. ಅವರ ಆಸೆಯಂತೆ ಪ್ರತಿಮೆ ನಗರದಲ್ಲಿ ರಾರಾಜಿಸುತ್ತಿದೆ. ಶ್ರೀಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯ ಮುಂದೆ ಕಂಚಿನ ಪ್ರತಿಮೆ ನಿರ್ಮಾಣವಾಗಲಿ. ತರಾಸುರವರ ಪುಸ್ತಕಗಳು ಗ್ರಂಥಾಲಯದಲ್ಲಿ ಎಲ್ಲರಿಗೂ ಓದಲು ಸಿಗುವಂತಾಗಬೇಕೆಂದು ಮನವಿ ಮಾಡಿದರು.
ಶ್ರೀಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಅ ಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಬಾರಿ ತರಾಸುರವರ 101ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಚಿತ್ರದುರ್ಗದ ಇತಿಹಾಸವನ್ನು ಬೆಳಕಿಗೆ ತಂದ ಶ್ರೇಷ್ಠ ಸಾಹಿತಿ ತರಾಸುರವರ ಪುಸ್ತಕಗಳನ್ನು ವಿಶೇಷವಾಗಿ ವಿದ್ಯಾರ್ಥಿಗಳು ಓದಿದಾಗ ಇತಿಹಾಸದ ಜ್ಞಾನ ಮೂಡುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರತಿಮೆಗೆ ಹೊಸ ರೂಪ ಕೊಡಲಾಗುವುದೆಂದು ತಿಳಿಸಿದರು.
ಡಾ| ಮಂಜುನಾಥ್, ಜಯಣ್ಣ ಸೇರಿದಂತೆ ವಿದ್ಯಾರ್ಥಿಗಳು, ತರಾಸು ಅಭಿಮಾನಿಗಳು ಜಯಂತಿಯಲ್ಲಿ ಭಾಗವಹಿಸಿದ್ದರು.