Advertisement
ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಎಚ್.ಕೆ. ಪಾಟೀಲ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಿದ್ದ ವೇಳೆಯಲ್ಲಿ ಗ್ರಾಮೀಣ ಭಾಗದ ಜನರು ಶುದ್ಧ ಕುಡಿಯುವ ನೀರು ಸೇವನೆ ಮಾಡಬೇಕೆಂದು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಂಖ್ಯೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿತ್ತು. ಆದರೆ ಆರಂಭದಲ್ಲಿ ಒಂದು ಅಥವಾ ಎರಡು ತಿಂಗಳ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಶುದ್ಧ ನೀರಿನ ಘಟಕಗಳು ಇಂದು ನೂರಾರು ಸಂಖ್ಯೆಯಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೇ ಬಾಗಿಲು ಮುಚ್ಚಿಕೊಂಡಿವೆ. ಸರ್ಕಾರದ ನೂರಾರು ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ.
Related Articles
Advertisement
ನಿರ್ವಹಣೆ ಸಮಸ್ಯೆ: ಶುದ್ಧ ಕುಡಿಯುವ ನೀರು ಘಟಕಗಳ ಬಹುಮುಖ್ಯ ಸಮಸ್ಯೆ ಎಂದರೆ ನಿರ್ವಹಣೆ. ಖಾಸಗಿ ಸಂಸ್ಥೆಗಳು ಅಳವಡಿಸಿದ ಘಟಕಗಳನ್ನು 5 ವರ್ಷ ಅವರೇ ನಿರ್ವಹಣೆ ಮಾಡಬೇಕಿತ್ತು. ಸಹಕಾರ ಸಂಘಗಳು ಅಳವಡಿಸಿದ ಘಟಕಗಳನ್ನು ಅವರೇ ನಿರ್ವಹಣೆ ಮಾಡಬೇಕು ಮತ್ತು ಕೆಆರ್ ಐಡಿಸಿಎಲ್ ಅಳವಡಿಸಿರುವ ಘಟಕಗಳನ್ನು ಸ್ಥಳೀಯ ಗ್ರಾಮ ಪಂಚಾಯತ್‌ದವರು ನಿರ್ವಹಣೆ ಮಾಡಬೇಕಿತ್ತು. ಆದರೆ ಘಟಕಗಳ ನಿರ್ವಹಣೆಗೆ ವೆಚ್ಚ ಮತ್ತು ಸಿಬ್ಬಂದಿ ವೇತನ ಭರಿಸಬೇಕಾದ ಹೊರೆ ಗ್ರಾಮ ಪಂಚಾಯತಿಗೆ ಬಿದ್ದಿರುವ ಪರಿಣಾಮ ಗ್ರಾಮ ಪಂಚಾಯತ್ ಅಧಿಕಾರಿಗಳು ಘಟಕಗಳ ನಿರ್ವಹಣೆಗೆ ಮೀನಾಮೇಷ ಅನುಸರಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈಗ ಎಲ್ಲ ಘಟಕಗಳ ನಿರ್ವಹಣೆಯ ಹೊಣೆಯನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ನೀಡಿದೆ. ಹಾಳಾದ ಘಟಕಗಳನ್ನು ದುರಸ್ತಿಗೊಳಿಸಿ ಸಮರ್ಪಕ ನಿರ್ವಹಣೆ ಮಾಡಲಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ತಾಲೂಕಿನಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಬಂದ್ ಬಿದ್ದಿವೆ. ಸರ್ಕಾರ ಸೂಕ್ತ ನಿರ್ವಹಣೆ ಮಾಡಿ ಜನರಿಗೆ ನೀರು ಕೊಡಬೇಕು. ಸ್ಥಳೀಯ ಉಮರಾಣಿ ಗ್ರಾಮದಲ್ಲಿ ಅಳವಡಿಸಿರುವ ಘಟಕ ಬಂದ್ ಆಗಿ ಎರಡು ವರ್ಷ ಕಳೆದಿದೆ. ಇನ್ನೂ ದುರಸ್ತಿಯಾಗಿಲ್ಲ, ಕೂಡಲೇ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಶುದ್ಧ ನೀರು ಕೊಡಲು ಮುಂದೆ ಬರಬೇಕು. ಮುರಿಗೆಪ್ಪ ಅಡಿಸೇರಿಮಾಜಿ ಅಧ್ಯಕ್ಷರು ಉಮರಾಣಿ ಚಿಕ್ಕೋಡಿ ತಾಲೂಕಿನ 185 ಘಟಕಗಳಲ್ಲಿ ಈಗ ಎಲ್ಲವನ್ನೂ ದುರಸ್ತಿಗೊಳಿಸಲಾಗಿದೆ. ಏಳು ಘಟಕಗಳನ್ನು ದುರಸ್ತಿ ಮಾಡಬೇಕಿದೆ. ಬರುವ ಒಂದು ವಾರದೊಳಗೆ ಎಲ್ಲ ಘಟಕಗಳನ್ನು ದುರಸ್ತಿಗೊಳಿಸಲಾಗುತ್ತದೆ. ನಿರ್ವಹಣೆ ಮಾಡಲು ಖಾಸಗಿ ಏಜೆನ್ಸಿಗೆ ಟೆಂಡರ್ ಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗ್ರಾಮೀಣ ಜನರು ಸಹ ಸಮರ್ಪಕವಾಗಿ ನೀರು ಬಳಕೆ ಮಾಡಿಕೊಳ್ಳಬೇಕು.
ಆನಂದ ಬಣಕಾರ,
ಎಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮಹಾದೇವ ಪೂಜೇರಿ