Advertisement

ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ಯತ್ನ

04:48 PM Apr 06, 2019 | Naveen |

ಮೂಡಿಗೆರೆ: ಸ್ವಾಂತಂತ್ರ್ಯ ಬಂದ ನಂತರ ದೇಶಕ್ಕೆ ಕಾಡದ ಅಭದ್ರತೆ ಕಳೆದ 5 ವರ್ಷದ ಹಿಂದೆ ಬಂದಿರುವ ನರೇಂದ್ರ
ಮೋದಿ ಪ್ರಧಾನಿಯಾದ ಬಳಿಕ ಕಾಡಲು ಶುರುವಾಯಿತೇ? ಅಥವಾ
ಚುನಾವಣೆಯಲ್ಲಿ ಗೆಲ್ಲಲು ವಾಮಮಾರ್ಗ ಬಳಸುವ ಉಪಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿದ್ದಾರೆಯೇ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

ಅವರು ಶುಕ್ರವಾರ ಸಂಜೆ ಮೂಡಿಗೆರೆ ಪಟ್ಟಣದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರ
ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಉಗ್ರರು ಭಯೋತ್ಪಾದನೆಯಲ್ಲಿ ತೊಡಗಿದಾಗ ಭಾರತೀಯ ಸೈನಿಕರು ಅದಕ್ಕೆ ತಕ್ಕ ಉತ್ತರ ನೀಡುವುದು ಹಿಂದಿನಿಂದಲೂ ನಡೆದು ಬಂದ ರೂಢಿ. ಆದರೆ ಪ್ರಧಾನಿ ಮೋದಿ ಅವರು, ತಾನೇ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಬಾಂಬ್‌ ಸಿಡಿಸಿ ಬಂದೆ ಎನ್ನುತ್ತಾ ದೇಶದ ಜನತೆಯ ದಾರಿ ತಪ್ಪಿಸಲು ಹೊರಟಿದ್ದಾರೆ. ದೇಶದ ಸೈನಿಕರಿಗೆ ಅಗೌರವ ತೋರಿಸುತ್ತಿದ್ದಾರೆ. ಇದರಿಂದಲೇ ಬಿಜೆಪಿಯ
ಪಥನದ ಹಾದಿ ಪ್ರಾರಂಭವಾಗುತ್ತಿದೆ ಎಂದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ತಾನು ಮುಖ್ಯಮಂತ್ರಿಯಾದ
ಬಳಿಕ ರಾಜ್ಯದ 15.58 ಲಕ್ಷ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಮುಂದಾದಾಗ ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ತಾನು ಜಗ್ಗದೇ ಈಗಾಗಲೇ 11.170 ಕೋಟಿ ಹಣ ವಿನಿಯೋಗಿಸಿ ಸಹಕಾರಿ ಹಾಗೂ ರಾಷ್ಟ್ರೀಕೃತ
ಬ್ಯಾಂಕ್‌ಗಳ ಮೊದಲ ಕಂತಿನ ಸಾಲ ಮನ್ನಾ ಮಾಡಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಸಂಪೂರ್ಣ ಸಾಲ ಮನ್ನಾ ಆಗಲಿದೆ. ರೈತರ
ಮತ್ತು ಕಾಫಿ ಬೆಳೆಗಾರರ ಸಮಸ್ಯೆಯನ್ನು ಮೋದಿ ಅವರಾಗಲಿ, ಅಥವಾ ರಾಜ್ಯದ 17 ಮಂದಿ ಬಿಜೆಪಿ ಸಂಸದರಾಗಲಿ ಆಲಿಸಿ
ಪರಿಹಾರ ಸೂಚಿಸಿಲ್ಲ. ರಾಜ್ಯ ಸರಕಾರ ರೈತರ ಹಾಗೂ ಕೂಲಿ ಕಾರ್ಮಿಕರ ಮತ್ತು ಬಡವರ ಪರ ಮಾಡಿದ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಿಜೆಪಿ
ಮಾಡುತ್ತಿದೆ ಎಂದು ಕಿಡಿ ಕಾರಿದರು.

ಕೇಂದ್ರದಲ್ಲಿ 5 ವರ್ಷ ಕಾಲಹರಣ ಮಾಡಿದ ಬಿಜೆಪಿ ಸರಕಾರವನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶದ ಜನ ಕಿತ್ತೂಗೆಯಲು ಬಯಸಿದ್ದಾರೆ. ಆ ಕಾರಣವಾಗಿ ರಾಜ್ಯದಲ್ಲಿ ಜೆಡಿಎಸ್‌ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.
28 ಸ್ಥಾನಗಳಲ್ಲೂ ಮೈತ್ರಿ ಅಭ್ಯರ್ಥಿಯೇ ಜಯಗಳಿಸಲಿದ್ದಾರೆ. ಆ ಮೂಲಕ ರಾಜ್ಯದ ಹಿತ ಕಾಯುವ ಜತೆಗೆ ದೇಶದ ಭದ್ರತೆ
ಮತ್ತಿತರೇ ಜನರ ತೀರ್ಮಾನದಂತೆ ಮೋದಿ ರಹಿತ ಸರಕಾರ ಕೇಂದ್ರದಲ್ಲಿ ರಚನೆಯಾಗಲಿದೆ ಎಂದು ತಿಳಿಸಿದರು.

Advertisement

ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರು ಎಚ್‌.ಡಿ.ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಯುವಕರು ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣೆ ಮುಂಚಿತವಾಗಿ 3 ದಿನವಿರುವಾಗಲೇ ಆಸ್ಪತ್ರೆಗೆ ದಾಖಲಾಗಲಿದ್ದಾರೆಂದು ಹರಿಯಬಿಟ್ಟಿದ್ದಾರೆ.
ಜನರ ವಿಶ್ವಾಸ ಇರುವತನಕ ತಾನು ಗಟ್ಟಿ ಮುಟ್ಟಾಗಿ ಇರುತ್ತೇನೆ. ಇಸ್ರೇಲ್‌ ದೇಶಕ್ಕೆ ಹೋದಾಗ ಆರೋಗ್ಯ ಕೆಟ್ಟಿತ್ತು. ಆಸ್ಪತ್ರೆಗೆ
ದಾಖಲಾಗುವಂತೆ ವೈದ್ಯರು ಸೂಚಿಸಿದ್ದರು. ತಾನು ದಾಖಲಾಗದೇ ರೈತರ ಪರವಾಗಿ ಅಧ್ಯಯನ ನಡೆಸಿ ಬಂದಿದ್ದೇನೆ. ಬಿಜೆಪಿ ಅವರ ಬಯಕೆಯಂತೆ ತಾನು ಸಾಯಲಾರೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಅವರು 5 ವರ್ಷದಲ್ಲಿ ಕ್ಷೇತ್ರದತ್ತ ತಲೆ ಹಾಕಿರಲಿಲ್ಲ. ರಾಜ್ಯದ ಯಾವುದೂ ಒಂದು ಜಿಲ್ಲೆಯಲ್ಲಿ ಕುರಿತು ಹಿಂದುಗಳ ಹತ್ಯೆಯಾಗಿದೆ ಎಂದು ಭಾಷಣ ಬಿಗಿಯುತ್ತಿದ್ದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬೆಳೆಗಾರರ ಹಾಗೂ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಅಥವಾ ಬೇರೆಲ್ಲಿಯೂ ಚಕಾರವೆತ್ತಲಿಲ್ಲ. ಈಗ ಸ್ವ ಪಕ್ಷೀಯರಿಂದಲೇ ಗೋಬ್ಯಾಕ್‌ ಚಳುವಳಿಗೆ ತುತ್ತಾಗಿದ್ದಾರೆ. ಇಂತಹ ಸಂಸದೆಯನ್ನು ಬಿಜೆಪಿಯವರ ಚಳುವಳಿಯಂತೆ ಮನೆಗೆ
ಕಳುಹಿಸಬೇಕೆಂದು ಮನವಿ ಮಾಡಿದರು.

ಮೋದಿ ಪರ ಘೋಷಣೆ ಕೂಗಿದವರ ಬಂಧನ: ಮೂಡಿಗೆರೆ ಪಟ್ಟಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ
ಬರುವ ವೇಳೆ ಮೋದಿ ಪರವಾಗಿ ಘೋಷಣೆ ಕೂಗಿದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next