Advertisement

ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ: ಬಸವರಾಜ್‌ ಚೇಂಗಟಿ

06:23 PM Feb 14, 2020 | Naveen |

ಚಿಕ್ಕಮಗಳೂರು: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಹಾಗಾಗಿ, ಕಾನೂನು ನಿಯಮಗಳ ಬಗ್ಗೆ ಪೋಷಕರಿಗೆ ಮತ್ತು ಮಕ್ಕಳಿಗೆ ತಿಳಿವಳಿಕೆ ನೀಡಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ ಹೇಳಿದರು.

Advertisement

ನಗರದ ಮೌಂಟೆನ್‌ ವ್ಯೂ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ದೇಶದ ಆಸ್ತಿಯಾಗಿದ್ದು, ಮೊದಲು ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆರ್ಥಿಕವಾಗಿ,ದೈಹಿಕವಾಗಿ ಸಬಲರಾದಾಗ ವಿವಾಹದ ಕುರಿತು ಆಲೋಚಿಸಬೇಕು. ಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಕೀಳರಿಮೆ ಮನೋಭಾವ ಬಿಟ್ಟು ಬಾಲ್ಯದಿಂದಲೇ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಪೋಕ್ಸೋ ಕಾಯಿದೆ ಅತ್ಯಂತ ಪ್ರಬಲವಾಗಿದೆ. ಅಪಾಯಕಾರಿ ಸ್ಥಳಗಳಿಗೆ ಹೋಗುವಾಗ ಮುಂಜಾಗ್ರತೆ ವಹಿಸಬೇಕು. ಮಕ್ಕಳು ಒಬ್ಬಂಟಿಯಾಗಿ ಹೋಗದೆ ಪೋಷಕರೊಂದಿಗೆ ಹೋಗುವುದು ಒಳಿತು. ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಲೈಂಗಿಕ ಸಮಸ್ಯೆಗಳು ಎದುರಾದಾಗ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ನೆರವು ಪಡೆದುಕೊಳ್ಳುವಂತೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿ ಕಾರಿ ಮಂಜುನಾಥ್‌ ಮಾತನಾಡಿ, ಬಡಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಉಚಿತ ಹಾಸ್ಟೆಲ್‌, ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡುವಂತೆ ತಿಳಿಸಿದರು.

Advertisement

ಎಸ್‌.ಎಸ್‌.ಎಸ್‌.ಸಿ., ಪಿಯುಸಿ ಹಂತ ವಿದ್ಯಾರ್ಥಿಗಳ ಮಹತ್ವದ ಘಟ್ಟವಾಗಿದ್ದು, ಶಿಸ್ತು, ಶ್ರದ್ಧೆಯ ಜೊತೆಗೆ ನಿರಂತರ ಓದಿನ ಮೂಲಕ ಸಾಧನೆ ಮಾಡಬೇಕು. ಗಣಿತ, ಇಂಗ್ಲಿಷ್‌ ಮುಂತಾದ ಕ್ಲಿಷ್ಟ ವಿಷಯಗಳಲ್ಲಿ ಸಮಸ್ಯೆಗಳು ಎದುರಾದಾಗ ಶಿಕ್ಷಕರು, ಸಹಪಾಠಿಗಳೊಂದಿಗೆ ಚರ್ಚೆ ನಡೆಸಬೇಕು. ಉತ್ತಮ ಫಲಿತಾಂಶದ ಮೂಲಕ ಶಾಲೆ, ಕುಟುಂಬ, ಸಮಾಜಕ್ಕೆ ಒಳ್ಳೆಯ ಹೆಸರು ತಂದು ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿ, ಸರ್ವೋದಯ ಸಂಸ್ಥೆ ಮುಖ್ಯಸ್ಥ ಹಾಗೂ ವಕೀಲರಾದ ಚಂದ್ರಶೇಖರ್‌ ಪೋಕ್ಸೋ ಕಾಯಿದೆ ಬಗ್ಗೆ ಹಾಗೂ ಮಕ್ಕಳ ಸಹಾಯವಾಣಿ ಸಂಸ್ಥೆ ಅಧಿಕಾರಿ ಸಿದ್ದರಾಮಯ್ಯ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಉಪನ್ಯಾಸ ನೀಡಿದರು.

ಮೌಂಟೆನ್‌ ವ್ಯೂ ಸಂಸ್ಥೆಯ ಆಡಳಿತಾಧಿಕಾರಿ ಭದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ರಕ್ಷಣಾ ಅಧಿಕಾರಿ ಮಂಜುನಾಥ್‌, ಸರ್ಕಾರಿ ವಕೀಲ ಕೃಷ್ಣೇಗೌಡ, ಆರೋಗ್ಯಾಧಿಕಾರಿ ರೇಣುಕಾ, ಸಂಸ್ಥೆಯ ಕಾರ್ಯದರ್ಶಿ ಅಬಿಬಾ ಎನ್‌. ಪಾಶಾ, ಸುರೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next