Advertisement

ಕೆರೆ-ಕಟ್ಟೆ-ಕಲ್ಯಾಣಿ ನಿರ್ವಹಣೆಗೆ ಮುಂದಾಗಿ

05:21 PM Feb 19, 2020 | |

ಚಿಕ್ಕಮಗಳೂರು: ಜನಸಾಮಾನ್ಯರು ಸೇರಿದಂತೆ ಜನಪ್ರತಿನಿಧಿಗಳು ಕೆರೆ-ಕಟ್ಟೆ ಹಾಗೂ ಕಲ್ಯಾಣಿಗಳ ನಿರ್ವಹಣೆಗೆ ಕೈಜೋಡಿಸಿದಾಗ ಅಂತರ್ಜಲ ಮಟ್ಟ ಹಾಗೂ ನೀರಿನ ಸಂಗ್ರಹಣ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಉಪವಿಭಾಗಾಧಿಕಾರಿ ಡಾ| ಎಚ್‌.ಎಲ್‌.
ನಾಗರಾಜ್‌ ಹೇಳಿದರು.

Advertisement

ನಗರದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಬೆಂಗಳೂರಿನ ಅಂತರ್ಜಲ ನಿರ್ದೇಶನಾಲಯ ಹಾಗೂ ಜಿಲ್ಲಾ ಅಂತರ್ಜಲ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತರ್ಜಲ ಸದ್ಬಳಕೆ, ಅತೀ ಬಳಕೆ ನಿಯಂತ್ರಣ, ಗುಣಮಟ್ಟ, ಮಳೆ ನೀರು ಸಂರಕ್ಷಣೆ ಹಾಗೂ ತೆರೆದ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಕುರಿತು ಆಯೋಜಿಸಿದ್ದ ಅಂತರ್ಜಲ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅಂತರ್ಜಲ ಕುಸಿತ ಮತ್ತು ನೀರಿನ ಕೊರತೆ ಜಾಗತಿಕ ಸಮಸ್ಯೆಯಾಗಿದೆ. ನೀರಿನ ಕೊರತೆ ನಿವಾರಿಸಲು ಸಾರ್ವಜನಿಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಇಂದಿನಿಂದಲೇ ಅಗತ್ಯ ಕ್ರಮ ವಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ನೀರನ ಮೂಲಗಳನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರತಿ ಮನೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು ನೀರನ್ನು ಮಿತವಾಗಿ ಬಳಕೆ ಮಾಡುವುದರಿಂದ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು. ಹರಿಯುವ ನೀರನ್ನು ಒಂದೆಡೆ ನಿಲ್ಲಿಸಿ ಭೂಮಿಯಲ್ಲಿ ಇಂಗುವಂತೆ ಮಾಡಬೇಕು ಎಂದು ತಿಳಿಸಿದರು.

ಕೆರೆಕಟ್ಟೆಗಳಲ್ಲಿನ ಹೂಳೆತ್ತುವುದು ಸರ್ಕಾರದ ಕೆಲಸ ನಮ್ಮ ಕೆಲಸವಲ್ಲ ಎಂಬ ಮನೋಭಾವದಿಂದ ಸಾರ್ವಜನಿಕರು ಹೊರಬರಬೇಕು. ಕೆರೆಕಟ್ಟೆ-ಕಲ್ಯಾಣಿಗಳು ಎಲ್ಲರ ಆಸ್ತಿಯಾಗಿದ್ದು, ಇಂತಹ ಕಾರ್ಯಗಳಲ್ಲಿ ಸಾರ್ವಜನಿಕರು ಕೈಜೋಡಿಸಬೇಕು. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.

Advertisement

ಅನೇಕ ಕಡೆಗಳಲ್ಲಿ ಕೆರೆ ಒತ್ತುವರಿಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಅಂತರ್ಜಲ ಕಚೇರಿ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಅ ಧಿಕಾರಿಗಳು ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಬೇಕು ಮತ್ತು ಕೆರೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲು ಮುಂದಾಗಬೇಕೆಂದು ಕರೆ ನೀಡಿದರು.

ತಾಲೂಕು ಪಂಚಾಯತ್‌ ಅಧ್ಯಕ್ಷ ಜಯಣ್ಣ ಮಾತನಾಡಿ, ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಅಪಾಯಕಾರಿ. ಇಂದು ಅಂತರ್ಜಲ ಹೆಚ್ಚಿಸಲು ಮುಂದಾಗಬೇಕಾದ ಅನಿವಾರ್ಯತೆ ಇದೆ. ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾಯಿತ ಪ್ರತಿನಿಧಿ ಗಳು ಮಳೆ ನೀರಿನ ಸಂಗ್ರಹಣೆ ಮಾಡುವ ಕ್ರಮವನ್ನು ಅಳವಡಿಸಿಕೊಂಡು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಕೆರೆ ಒತ್ತುವರಿ ಮಾಡಿರುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಎಚ್‌ .ಡಿ. ರೇವಣ್ಣ, ಜಿಲ್ಲೆಯ ಬಯಲು ಸೀಮೆ ಹಾಗೂ ಮಲೆನಾಡು ಭಾಗಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಹೊಲಗಳಿಗೆ ಬದುಗಳನ್ನು ಮತ್ತು
ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದಾಗ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಾಗಲಿದೆ ಎಂದರು.

ತೆರೆದ ಕೊಳವೆ ಬಾವಿಗಳಲ್ಲಿ ಸಣ್ಣ ಮಕ್ಕಳು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ರಾಜ್ಯದ ಅನೇಕ ಕಡೆಗಳಲ್ಲಿ ನಡೆದಿದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ಮುಂಜಾಗ್ರತೆಯಾಗಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್‌ ವತಿಯಿಂದ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸುಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಭೂ ವಿಜ್ಞಾನಿ ಕೆ.ಜಿ.ಸೌಮ್ಯಾ, ನಂದಿನಿ, ಶೇಖ್‌ ದಾವೂದ್‌, ಶಿರಸ್ತೇದಾರ್‌ ರತ್ನಾಕರ್‌, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next