ಚಿಕ್ಕಮಗಳೂರು: ಕೋವಿಡ್ ಟೆಸ್ಟಿಂಗ್ ಲ್ಯಾಬ್ ಆರಂಭಿಸಬೇಕೆಂಬ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ನಗರದ ಹೆರಿಗೆ ಆಸ್ಪತ್ರೆ ಕಟ್ಟಡದಲ್ಲಿ 1.48 ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೋವಿಡ್ ಸೋಂಕು ಪ್ರಕರಣ ದೇಶದ್ಯಾಂತ ದಿನೇ ದಿನೇ ಹೆಚ್ಚುತ್ತಿದೆ. ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದ ನಂತರ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 16 ಸೋಂಕು ಪ್ರಕರಣಗಳು ಕಂಡು ಬಂದಿದ್ದು 8 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಸೋಂಕಿನ ಶಂಕಿತ ಪ್ರಕರಣಗಳ ರಕ್ತದ ಮಾದರಿ ಹಾಗೂ ಗಂಟಲದ್ರವ ಪರೀಕ್ಷೆಗೆ ನೆರೆಯ ಶಿವಮೊಗ್ಗ ಹಾಗೂ ಹಾಸನ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿತ್ತು. ಪರೀಕ್ಷ ವರದಿ ಬರಲು ಕಾಲಾವಕಾಶ ತೆಗೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಟೆಸ್ಟಿಂಗ್ ಲ್ಯಾಬ್ ನಿರ್ಮಾಣ ಮಾಡಬೇಕೆಂದು ಬಹುದಿನಗಳ ಕೂಗು ಜಿಲ್ಲೆಯ ಜನರದಾಗಿತ್ತು. ಕೊಡಗಿನಂತ ಸೆಣ್ಣ ಜಿಲ್ಲೆಯಲ್ಲಿ ಪ್ರಯೋಗಾಲಯ ತೆರೆಯಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದರೂ ಟೆಸ್ಟಿಂಗ್ ಲ್ಯಾಬ್ ನಿರ್ಮಾಣವಾಗಿಲ್ಲ ಶೀಘ್ರದಲ್ಲೇ ಲ್ಯಾಬ್ ತೆರೆಯುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡವು ಬಂದಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮೇ ಅಂತ್ಯದೊಳಗೆ ಅಥವಾ ಜೂನ್ ತಿಂಗಳಲ್ಲಿ ಲ್ಯಾಬ್ ತೆರೆಯುವುದಾಗಿ ಭರವಸೆಯನ್ನು ನೀಡಿದ್ದರು. ಅದರಂತೆ ಜೂನ್ ಅಂತ್ಯದೊಳಗೆ ಜಿಲ್ಲೆಯಲ್ಲಿ ಲ್ಯಾಬ್ ಕಾರ್ಯಾರಂಭ ಮಾಡಲಿದೆ. ಕಳೆದ ಮೂರು ದಿನಗಳಿಂದ ನಗರದ ಹೆರಿಗೆ ಆಸ್ಪತ್ರೆ ಕಟ್ಟಡದಲ್ಲಿ ಲ್ಯಾಬ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆಯಾಗಿರುವ 1.48 ಕೋಟಿ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಈಗಾಗಲೇ 25ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಸಿವಿಲ್ ಕಾಮಗಾರಿ ಚಾಲನೆ ನೀಡಲಾಗಿದೆ. 1.6 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳನ್ನು ವಿದೇಶದಿಂದ ಖರೀದಿಗೆ ಬಳಕೆ ಮಾಡಲಾಗುತ್ತಿದೆ.
ಲ್ಯಾಬ್ ನಿರ್ಮಾಣ ಎರಡು ಹಂತದಲ್ಲಿ ನಡೆಯಲಿದ್ದು ಮೊದಲ ಹಂತದಲ್ಲಿ ಮೂಲ ಸೌಲಭ್ಯ ಎರಡನೇ ಹಂತದಲ್ಲಿ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿ ನಡೆಯಲಿದೆ. ಜೂನ್ ಅಂತ್ಯದಲ್ಲಿ ಲ್ಯಾಬ್ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಜಿಲ್ಲಾ ಸರ್ಜನ್ ಡಾ| ಸಿ. ಮೋಹನ್ ಕುಮಾರ್ ತಿಳಿಸಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಲ್ಯಾಬ್ ನಿರ್ಮಿಸಲಾಗುತ್ತಿದ್ದು, ವಿದೇಶದಿಂದ ಉಪಕರಣ ಖರೀದಿಸಲು ನಿರ್ಧರಿಸಲಾಗಿದೆ. ದಿನಕ್ಕೆ 500ರಿಂದ 600 ಶಂಕಿತರ ರಕ್ತದ ಮಾದರಿ ಹಾಗೂ ಗಂಟಲದ್ರವ ಪರೀಕ್ಷೆ ನಡೆಸುವ ಸಾರ್ಮಥ್ಯ ಹೊಂದಿರಲಿದೆ. ಪರೀಕ್ಷ ವರದಿಗಳು ಅಂದೇ ನೀಡಲು ಸಾಧ್ಯವಾಗಲಿದೆ.?
ಡಾ| ಸಿ. ಮೋಹನ್‌ಕುಮಾರ್,
ಜಿಲ್ಲಾ ಸರ್ಜನ್