Advertisement

ಅನಧಿಕೃತ ರೆಸಾರ್ಟ್‌ ಮುಚ್ಚಿಸಿ

05:25 PM Oct 12, 2019 | Team Udayavani |

ಚಿಕ್ಕಮಗಳೂರು: ತಾಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ರೆಸಾರ್ಟ್‌ಗಳನ್ನು ಗುರುತಿಸಿ, ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.

Advertisement

ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಿರಿ ಶ್ರೇಣಿಗಳಲ್ಲಿ ಪ್ರವಾಸಿಗರಿಗಿಂತಲೂ ಹೆಚ್ಚಾಗಿ ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳಿಂದ ತ್ಯಾಜ್ಯ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಧಿಕೃತವಾಗಿ ಎಲ್ಲ ರೀತಿಯ ಅನುಮತಿ ಪಡೆದು ನಡೆಯುತ್ತಿರುವ ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳಿಗೆ ಸ್ವಚ್ಛತೆ ಕಾಪಾಡುವಂತೆ ಸೂಚಿಸಬೇಕು.

ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳಿಗೆ ಕೂಡಲೆ ನೋಟಿಸ್‌ ನೀಡಿ ಅವುಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು. ಅಲ್ಲಂಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಎರಡು ರೆಸಾರ್ಟ್‌ಗಳು ಅನಧಿಕೃತವಾಗಿ ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ. 24 ಗಂಟೆಗಳೊಳಗಾಗಿ ಈ ಎರಡು ರೆಸಾರ್ಟ್‌ಗಳಿಗೆ ನೋಟಿಸ್‌ ನೀಡಿ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆ ರೆಸಾರ್ಟ್ಗಳಿಗೆ ಮುಂಗಡವಾಗಿ ರೂಂಗಳನ್ನು ಬುಕ್‌ ಮಾಡಿದ್ದರೂ
ಅದನ್ನು ರದ್ದುಪಡಿಸಿ ಮುಚ್ಚಿಸಬೇಕೆಂದು ಅಲ್ಲಂಪುರ ಗ್ರಾಮ ಪಂಚಾಯತ್‌ ಪಿಡಿಒ ಹಾಗೂ ತಾಪಂ ಇಒಗೆ ಸೂಚನೆ ನೀಡಿದರು.

ಅಲ್ಲದೇ, ಕ್ರಮ ಕೈಗೊಂಡ ಕುರಿತು ತಮಗೆ ಮಾಹಿತಿ ನೀಡುವಂತೆ ತಿಳಿಸಿದರು. ಗಿರಿಶ್ರೇಣಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಶ್ರೇಣಿಗಳಲ್ಲಿ ಸ್ವತ್ಛತೆ ಕಾಪಾಡುವುದು ಗ್ರಾಮ ಪಂಚಾಯತ್‌ ಗಳ ಜವಾಬ್ದಾರಿ. ಗಿರಿಶ್ರೇಣಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್‌ಗಳು ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕು. ಗ್ರಾಮ ಪಂಚಾಯತ್‌ಗಳು ಮಾಡಬೇಕಾದ ಕೆಲಸವನ್ನು ಅವರೇ ಮಾಡಬೇಕು. ಅದು ಬಿಟ್ಟು ಕಂದಾಯ, ಅರಣ್ಯ ಅಥವಾ ಪೊಲೀಸ್‌ ಇಲಾಖೆ ಆ ಕೆಲಸಗಳನ್ನು ಮಾಡಲಾಗುವುದಿಲ್ಲ. ಸರ್ಕಾರದಿಂದ ಪಡೆಯುವ ಸಂಬಳಕ್ಕೆ ತಕ್ಕಂತೆ ಕೆಲಸವನ್ನು ಮಾಡಿ ಇಲ್ಲವೇ ಬಿಟ್ಟು ಹೋಗಿ. ಬೇರೆಯವರು ಬಂದು ಕೆಲಸ ಮಾಡುತ್ತಾರೆ ಎಂದು ತಾಕೀತು ಮಾಡಿದರು.

ಕೈಮರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳಿಂದ ಟೋಲ್‌ ಸಂಗ್ರಹಿಸುವವರು ಪ್ರವಾಸಿಗರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ದೂರಿನ ಕುರಿತು ಮಾತನಾಡಿದ ಅವರು, ಚೆಕ್‌ಪೋಸ್ಟ್ ನಲ್ಲಿ ನೀಡುತ್ತಿರುವ ರಶೀದಿಯಲ್ಲಿ ಸೀಲ್‌ ಆಗಲಿ, ಸಹಿ ಆಗಲಿ ಇಲ್ಲ. ಈ ವ್ಯವಸ್ಥೆ ಸರಿಯಲ್ಲ. ಕೂಡಲೆ ರಶೀದಿಗೆ ದಿನಾಂಕ, ಸಮಯ ನಮೂದಿಸುವುದಲ್ಲದೇ, ಸಹಿ ಹಾಕಿ ರಶೀದಿ ಕೊಡಬೇಕೆಂದು ಹೇಳಿದರು.

Advertisement

ಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಬೇರೆ ಯಾವ ರೀತಿಯ ಬದಲಾವಣೆ ಮಾಡಬಹುದು ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದರು.

ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿಯ ಗಿರೀಶ್‌ ಮಾತನಾಡಿ, ಗಿರಿಶ್ರೇಣಿಗೆ ಆಗಮಿಸುವ ಪ್ರವಾಸಿಗರ ವಾಹನಗಳಿಗೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ನಿಷೇಧ ಹೇರಲಾಗಿದೆ. ಆ ಸಮಯವನ್ನು ಬೆಳಗ್ಗೆ 8 ಗಂಟೆಯವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಈಗ ಆ ಬದಲಾವಣೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಪ್ರಯತ್ನಿಸೋಣ ಎಂದರು.

ಗಿರಿಶ್ರೇಣಿಗೆ ಮದ್ಯ ತೆಗೆದುಕೊಂಡು ಹೋಗುವ ಪ್ರವಾಸಿಗರನ್ನು ತಡೆಗಟ್ಟುವ ವಿಚಾರ ಕುರಿತು ಚರ್ಚೆ ನಡೆದಾಗ, ಚೆಕ್‌ಪೋಸ್ಟ್‌ ಬಳಿಯೇ ಬ್ಯಾಂಕ್‌ಗಳಲ್ಲಿ ಇರುವಂತೆ ಲಾಕರ್‌ಗಳನ್ನು ಇಡುವುದು ಸೂಕ್ತ ಎಂಬ ಸಲಹೆ ಬಂದಿತು.

ಪ್ರಾಯೋಗಿಕವಾಗಿ ಮೊದಲು 20 ಲಾಕರ್‌ಗಳನ್ನು ಇಟ್ಟು ನೋಡೋಣ. ಅದು ಯಶಸ್ವಿಯಾದಲ್ಲಿ ಮುಂದೆ ಲಾಕರ್‌ ಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ತೀರ್ಮಾನಿಸಿ, ಕೂಡಲೆ 20 ಲಾಕರ್‌ಗಳನ್ನು ಒದಗಿಸುವಂತೆ ಮುಜರಾಯಿ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ, ಉಪಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌, ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿಯ ಜಯಂತ್‌ ಪೈ ಇತರರು
ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next