Advertisement

ಐಎಫ್‌ಎಸ್‌ ಅಧಿಕಾರಿಗಳಿಗೆ ತರಬೇತಿ

01:35 PM Nov 16, 2019 | Naveen |

ಚಿಕ್ಕಮಗಳೂರು: ದೇಶದಲ್ಲೇ ಅತ್ಯಂತ ಯಶಸ್ವಿಯಾದ ಸ್ಥಳಾಂತರ ಮತ್ತು ಪುನರ್ವಸತಿ ಯೋಜನೆ ಎಂಬ ಖ್ಯಾತಿ ಪಡೆದಿರುವ ಭದ್ರಾ ಅಭಯಾರಣ್ಯ ಪುನರ್ವಸತಿ ಯೋಜನೆ ಅಧ್ಯಯನಕ್ಕೆ 14 ರಾಜ್ಯಗಳ ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ಆಗಮಿಸಿದ್ದರು.

Advertisement

ವೈಲ್ಡ್‌ಲೈಫ್‌ ಕನ್ಸರ್ವೇಶನ್‌ ಸೊಸೈಟಿ ಈ ಜಿಲ್ಲೆಯ ವೈಲ್ಡ್‌ಕ್ಯಾಟ್‌-ಸಿ ಸಹಕಾರದಲ್ಲಿ ಭದ್ರಾ ಅಭಯಾರಣ್ಯದಲ್ಲಿ ಹಮ್ಮಿಕೊಂಡ ಈ ತರಬೇತಿ ಕಾರ್ಯಕ್ರಮದಲ್ಲಿ ಭದ್ರಾ ಪುನರ್ವಸತಿ ಯೋಜನೆ ಯಾವ ರೀತಿ ಯಶಸ್ವಿಯಾಯಿತೆಂಬುದರ ಬಗ್ಗೆ ವಿವರಿಸಲಾಯಿತು.

ದೇಶದ ಗುಜರಾತ್‌, ತೆಲಂಗಾಣ, ರಾಜಾಸ್ಥಾನ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ನಾಗಾಲ್ಯಾಂಡ್‌, ಜಾರ್ಖಂಡ್‌, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ 14 ರಾಜ್ಯಗಳ 21 ಜನ ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ಹುಲಿ ಮೀಸಲು ಅರಣ್ಯ ಪ್ರದೇಶ ಹಾಗೂ ಅದರೊಳಗಿನ ಕುಟುಂಬಗಳ ಪುನರ್ವಸತಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ ಪಡೆದರು.

ಪುನರ್ವಸತಿ ಯೋಜನೆಯ ಪೂರ್ಣ ರೂಪುರೇಷೆ ಸಿದ್ಧಪಡಿಸಿದ್ದ ಅಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎಚ್‌. ಗೋಪಾಲಕೃಷ್ಣಗೌಡ, ಅಂದಿನ ಭದ್ರಾ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್‌ಕುಮಾರ್‌, ಈ ಯೋಜನೆ ಯಶಸ್ಸಿಗೆ ಕಾರ್ಯ ನಿರ್ವಹಿಸಿದ ವೈಲ್ಡ್‌ ಲೈಫ್‌ ಕನ್ಸರ್ವೇಶನ್‌ ಸಂಸ್ಥೆ ಮುಖ್ಯಸ್ಥ ಡಿ.ವಿ.ಗಿರೀಶ್‌ ಪ್ರತಿ ಹಂತದಲ್ಲೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಪುನರ್ವಸತಿ ಮಾಡುವಾಗ ಅನುಸರಿಸಿದ ಪ್ರತಿ ಹಂತದ ವಿವರ ಸಿದ್ಧಪಡಿಸಿದ ರೀತಿ ಹಾಗೂ ಅಧಿಕಾರಿಗಳೊಂದಿಗೆ ಸೇರಿ ಅನುಸರಿಸಿದ ಕ್ರಮಗಳ ಬಗ್ಗೆ ವೈಲ್ಡ್‌ಲೈಫ್‌ ಕನ್ಸರ್ವೇಶನ್‌ ಸೊಸೈಟಿ ನಿರ್ದೇಶಕಿ ಪ್ರಕೃತಿ ಶ್ರೀವಾತ್ಸವ ವಿವರಿಸಿದರು. ಅರಣ್ಯಾಧಿಕಾರಿಗಳ ತಂಡ ಭದ್ರಾ ಅಭಯಾರಣ್ಯದೊಳಗೆ ಸಂಚರಿಸಿ ಅಲ್ಲಿನ ಪ್ರಾಕೃತಿಕ ಹಾಗೂ ಪ್ರಾಣಿ ಬಾಹುಳ್ಯ ಬಗ್ಗೆ ಅರಿತರು. ಮಾನವ ಪ್ರಾಣಿಗಳ ಸಂಘರ್ಷದ ಚಿತ್ರವೊಂದನ್ನು ಪುನರ್ವಸತಿಗೆ ಮುನ್ನ ಯಾವ ರೀತಿ ಇತ್ತು ಎಂಬುದನ್ನು ವಿವರಿಸಲಾಯಿತು. ಜತೆಗೆ ಸಂವಾದ ಕಾರ್ಯಕ್ರಮವೂ ಇತ್ತು.

Advertisement

ಅರಣ್ಯಾಧಿಕಾರಿಗಳ ತಂಡ ಅಭಯಾರಣ್ಯದೊಳಗೆ ವಾಸವಾಗಿದ್ದು, ಈಗ ತರೀಕೆರೆ ಸಮೀಪದ ಮಳಲಿ ಚೆನ್ನೇನಹಳ್ಳಿಗೆ ಪುನರ್ವಸತಿಗೊಂಡಿರುವ ಕುಟುಂಬಗಳೊಂದಿಗೆ ಅಲ್ಲಿಗೆ ತೆರಳಿ ಮಾತುಕತೆ ನಡೆಸಿ ಅವರ ಅಭಿಪ್ರಾಯ ಪಡೆಯಿತು. ವಿವಿಧ ರಾಜ್ಯದ ಅರಣ್ಯಾಧಿಕಾರಿಗಳೊಂದಿಗೆ ರಾಜ್ಯದ ಪ್ರಧಾನ ವನ್ಯಜೀವಿ ಪರಿಪಾಲಕ ಸಂಜಯ್‌ ಮೋಹನ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ ಮೋಹನ್‌ ರಾಜ್‌, ಭದ್ರಾ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ ಸಂವಾದ ನಡೆಸಿ ಇಲಾಖೆ ಪುನರ್ವಸತಿ ಕಲ್ಪಿಸುವಾಗ ಅನುಸರಿಸಿದ ಕ್ರಮ ಹಾಗೂ ಸೂಕ್ತ ನಿರ್ಧಾರಗಳ ಬಗ್ಗೆ ವಿವರಿಸಿದರು.

ತರಬೇತಿ ಕಾರ್ಯಕ್ರಮ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು ಕಾಶ್ಮೀರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ವೇತಾ ಮತ್ತು ರಾಹುಲ್‌, ಇದೊಂದು ಅತ್ಯುತ್ತಮ ತರಬೇತಿ ಕಾರ್ಯಕ್ರಮ. ಭದ್ರಾ ಅಭಯಾರಣ್ಯ ಹಾಗೂ ಅದರೊಳಗಿದ್ದ ಕುಟುಂಬಗಳೆರಡಕ್ಕೂ ಲಾಭವಾಗಿದೆ. ಪುನರ್ವಸತಿ ನಂತರ ಕಾಡು ಪುನಶ್ಚೇತನ ಪಡೆಯುತ್ತಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಪರಿಸ್ಥಿತಿ, ಸಮಸ್ಯೆ ಇರುತ್ತದೆ. ಇಲ್ಲಿ ಪುನರ್ವಸತಿ ಅತ್ಯುತ್ತಮವಾಗಿ ನಡೆದಿದೆ. ಜಮ್ಮು-ಕಾಶ್ಮೀರದ ಕಾಡಿನ ಪರಿಸ್ಥಿತಿಯೇ ಬೇರೆ. ಅಲ್ಲಿ ಹುಲಿಯಂತಹ ಬಲಿಷ್ಠ ಬೇಟೆ ಪ್ರಾಣಿ ಇಲ್ಲ. ಕಾಡು ಸಹ ಬೇರೆ ರೀತಿಯದು ಎಂದರು.

ರಾಜಸ್ಥಾನ ರಾಜ್ಯದ ಕೋಟಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ ರಾಜ್‌ ಮಾತನಾಡಿ, ಹುಲಿ ಮೀಸಲು ಅರಣ್ಯದಲ್ಲಿದ್ದ ಜನವಸತಿಗೆ ಪುನರ್ವಸತಿ ಕಲ್ಪಿಸಿರುವುದು ಯಶಸ್ವಿಯಾಗಿದೆ. ವಿಶೇಷವೆಂದರೆ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾಧಿಕಾರಿಗಳು ಮತ್ತು ಭದ್ರಾ ಹುಲಿ ಮೀಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಉತ್ತಮ ಹೊಂದಾಣಿಕೆಯಲ್ಲಿ ಪುನರ್ವಸತಿ ಯೋಜನೆಯನ್ನು ಯಶಸ್ವಿಯಾಗಿ ರೂಪಿಸಿದ್ದಾರೆ ಎಂದರು. ಪಶ್ಚಿಮ ಬಂಗಾಳದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಘಾಟಕ್‌ ಮಾತನಾಡಿ, ಭದ್ರಾ ಅಭಯಾರಣ್ಯದೊಳಗಿನ ಜನವಸತಿಯ ಸ್ಥಳಾಂತರ ಹಾಗೂ ಪುನರ್ವಸತಿ ಕಲ್ಪಿಸಿರುವುದು ವಿಶೇಷವಾಗಿ ಕಂಡು ಬಂದಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆ ಜತೆ ಸ್ವಯಂ ಸೇವಾ ಸಂಸ್ಥೆ ಜತೆಗೂಡಿ ಕೆಲಸ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ರೀತಿ ಕಾರ್ಯ ನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆ ಇಲ್ಲ. ಈ ತರಬೇತಿ ಉತ್ತಮ ಒಳನೋಟಗಳನ್ನು ನೀಡಿತೆಂದುತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next