Advertisement
ಚಿಕ್ಕಮಗಳೂರು: ಮಳೆಯ ಅಬ್ಬರ ಮತ್ತು ಭೂ ಕುಸಿತ ಉಂಟಾಗಿದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್ ಅಂತ್ಯಕ್ಕೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
Related Articles
Advertisement
ಮಳೆಯ ಅಬ್ಬರಕ್ಕೆ ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿದಿದ್ದರಿಂದ ಕೆಲವು ದಿನಗಳ ಕಾಲ ಈ ಮಾರ್ಗದಲ್ಲಿ ಜಿಲ್ಲಾಡಳಿತ ವಾಹನ ಸಂಚಾರ ನಿಷೇಧಿಸಿತ್ತು. ಬಳಿಕ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಬಿಡುವು ನೀಡಿದ್ದ ಮಳೆ ಮುಂದುವರಿದ ಪರಿಣಾಮ ಮತ್ತೆ ಗುಡ್ಡ ಕುಸಿದಿದ್ದರಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಬೆಳಗಿನಿಂದ ಸಂಜೆ ವರೆಗೆ ಅವಕಾಶ ನೀಡಲಾಗಿದೆ. ಆದರೆ, ಭಾರೀ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರಗಳು ಪ್ರವಾಸಿಗರಿಗೆ ಮುದ ನೀಡುವ ಸ್ಥಳಗಳಾಗಿವೆ. ದತ್ತಪೀಠ ಮಾರ್ಗದ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಕೆಲ ದಿನ ಪ್ರವಾಸಿಗರ ಸಂಚಾರ ನಿಷೇಧಿಸಲಾಗಿತ್ತು. ಕಳಸಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮೇಲೆ ನೀರು ಹರಿದು ಆಗಾಗ ಸಂಪರ್ಕ ಕಡಿತಗೊಂಡಿತ್ತು. ಅನೇಕ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆ ತುಂಡಾಗಿ ಹಲವರು ಸಂಚಾರಕ್ಕಾಗಿ ಪ್ರಯಾಸ ಪಡಬೇಕಾಗಿತ್ತು.
ಮಲೆನಾಡು ಭಾಗದ ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚು ಹಾನಿ ಉಂಟಾಗಿದ್ದರೆ, ಬಲ್ಲಾಳರಾಯನ ದುರ್ಗ ಬಿರುಕು ಬಿಟ್ಟಿದೆ. ವರ್ಷಧಾರೆ ಜತೆಗೆ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳ ರಸ್ತೆಯಲ್ಲಿ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಹವಾಮಾನ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ತಿಂಗಳಿಂದ ಪ್ರವಾಸಿಗರ ಆಗಮನ ಹೆಚ್ಚಾಗುವ ನಿರೀಕ್ಷೆ ಇದೆ.