ಚಿಕ್ಕಮಗಳೂರು: ಅತಿವೃಷ್ಟಿಯಿಂದ ಹಾನಿಗೊಳಗಾಗಿ ಮನೆ ಕಳೆದುಕೊಂಡಿರುವ 112 ಮಂದಿ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಕುಮಾರ್ ತಿಳಿಸಿದರು.
“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಈ ಪೈಕಿ ಮನೆ ಹಾಗೂ ಭೂಮಿ ಕಳೆದುಕೊಂಡಿರುವ 31 ಕುಟುಂಬಗಳು ತಮಗೆ ಬೇರೆ ಜಾಗದಲ್ಲಿ ಮನೆ ಮತ್ತು ಭೂಮಿ ನೀಡಲು ಮನವಿ ಮಾಡಿದ್ದಲ್ಲದೇ, ಮನೆ ಸ್ಥಳಾಂತರಕ್ಕೆ ಒಪ್ಪಿಗೆ ಪತ್ರ ನೀಡಿವೆ ಎಂದು ಹೇಳಿದರು.
ಸಂತ್ರಸ್ತರ ಪುನರ್ವಸತಿಗೆ ಜಿಲ್ಲಾಡಳಿತ ಈಗಾಗಲೇ 257 ಎಕರೆ ಭೂಮಿಯನ್ನು ಮೂಡಿಗೆರೆ ತಾಲೂಕಿನ 15 ಗ್ರಾಮಗಳಲ್ಲಿ ಗುರುತಿಸಿದೆ. ಬಣಕಲ್ ಹೋಬಳಿಯಲ್ಲಿ 6 ಗ್ರಾಮ, ಗೋಣಿಬೀಡು ಹೋಬಳಿಯಲ್ಲಿ 1, ಕಸಬಾ ಹೋಬಳಿಯಲ್ಲಿ 2 ಮತ್ತು ಕಳಸಾ ಹೋಬಳಿಯಲ್ಲಿ 8 ಗ್ರಾಮಗಳಲ್ಲಿ ಭೂಮಿ ಗುರುತಿಸಲಾಗಿದೆ ಎಂದರು.
ಭೂಮಿ ಮತ್ತು ಮನೆ ಕಳೆದುಕೊಂಡವರಲ್ಲಿ ಕೆಲವರು ತಾವು ವಾಸಿಸುತ್ತಿದ್ದ ಜಾಗದಲ್ಲೇ ಮತ್ತೆ ವಾಸಿಸಲು ಅವಕಾಶ ನೀಡಿ ಸೌಲಭ್ಯ ಒದಗಿಸಬೇಕೆಂದು ಮನವಿ ಮುಂದಿಟ್ಟಿದ್ದಾರೆ. ಆದರೆ, ಈ ಸ್ಥಳಗಳಲ್ಲಿ ಮತ್ತೆ ಮಳೆ ಬಂದಲ್ಲಿ ಭೂಕುಸಿತ ಉಂಟಾಗುವ ಅಪಾಯವಿರುವುದರಿಂದ ಅಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ. ಹಾಗಾಗಿ, ಆ ರೀತಿ ಸೂಕ್ಷ ಪ್ರದೇಶದಲ್ಲಿದ್ದವರು ಬೇರೆ ಕಡೆಗೆ ಸ್ಥಳಾಂತರವಾಗಲೇಬೇಕು. ಅವರು ಹಿಂದೆ ಇದ್ದ ಸ್ಥಳದಲ್ಲೇ ವಾಸಿಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಡಾವಣೆ ನಿರ್ಮಿಸಿ ಸ್ಥಳಾಂತರ ಮಾಡಿದಲ್ಲಿ ಅಲ್ಲಿಗೆ ತೆರಳುವುದಿಲ್ಲ ಎಂದು ಕೆಲವರು ತಿಳಿಸಿದ್ದಾರೆ. ಅಲ್ಲದೇ, ತಮಗಿಷ್ಟವಾದ ಕಡೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಆ ರೀತಿ ಅವರಿಗಿಷ್ಟವಾದ ಕಡೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಾಗದು ಎಂದು ಹೇಳಿದರು.
ಬಡಾವಣೆ ಸಜ್ಜುಗೊಳಿಸಿದರೆ ಅಲ್ಲಿ ಹೆಚ್ಚು ಜನ ಒಟ್ಟಾಗಿ ವಾಸಿಸುವುದರಿಂದ ಮೂಲಭೂತ ಅವಶ್ಯಕತೆಗಳಾದ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳು ಕೇಳುವಂತೆ ಅವರಿಗಿಷ್ಟವಾದ ಕಡೆ ಮನೆ ನಿರ್ಮಾಣಕ್ಕೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಮನೆ ನಿರ್ಮಾಣಕ್ಕಾಗಿ ಸರ್ಕಾರ ಪ್ರತಿ ಸಂತ್ರಸ್ತ ಕುಟುಂಬಕ್ಕೂ 5 ಲಕ್ಷ ರೂ. ಘೋಷಿಸಿದ್ದು, ಅದನ್ನು ನೀಡಲಾಗುವುದು. ಮೊದಲು 1 ಲಕ್ಷ ರೂ. ಮುಂಗಡ ನೀಡಿ ನಂತರ ಮನೆ ನಿರ್ಮಾಣ ಕಾಮಗಾರಿ ಮುಂದುವರಿದಂತೆ ಉಳಿದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.