Advertisement

ಡೆಂಘೀ ಹರಡದಂತೆ ಜಾಗೃತಿ ಮೂಡಿಸಿ

06:42 PM Dec 02, 2019 | Naveen |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ ಗುನ್ಯಾ ಹಾಗೂ ಮಲೇರಿಯಾ ರೋಗಗಳು ಹರಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಡೆಂಘೀ ಮತ್ತು ಚಿಕೂನ್‌ ಗುನ್ಯಾ ಜಾಗೃತಿ ಕಾರ್ಯಕ್ರಮದಡಿ ನಾಗರಿಕರಿಗೆ ಒಂದು ಸವಾಲು ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ನಗರಸಭೆ ಹಾಗೂ ಪಪಂ ಅಧಿಕಾರಿಗಳು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಡೆಂಘೀ, ಚಿಕೂನ್‌ ಗುನ್ಯಾ ಹಾಗೂ ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ಮಲೇರಿಯಾ ರೋಗಕ್ಕೆ ತುತ್ತಾದವರ ಸಂಖ್ಯೆ 7, ಡೆಂಘೀ 188, ಚಿಕೂನ್‌ ಗುನ್ಯಾ 91 ಮತ್ತು ಮಿದುಳು ಜ್ವರಕ್ಕೆ ತುತ್ತಾದವರ 8 ಪ್ರಕರಣಗಳು ಕಂಡುಬಂದಿದ್ದು, ಇದಕ್ಕೆ ಸುತ್ತಮುತ್ತಲಿನ ಅನೈರ್ಮಲ್ಯದ ವಾತಾವರಣವೇ ಕಾರಣ. ಇಂತಹ ಸ್ಥಳಗಳಿಗೆ ಭೇಟಿ ನೀಡಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳು ಗುಂಡಿಗಳು, ಸಾರ್ವಜನಿಕ ನಲ್ಲಿಗಳು, ಚರಂಡಿ, ಕೊಳವೆ ಬಾವಿ, ಮೇಲ್ಛಾವಣಿಯ ತೊಟ್ಟಿಗಳಲ್ಲಿ ನೀರು ಸಂಗ್ರವಾಗಿರುವ ಕಡೆ ಸ್ವಚ್ಛಗೊಳಿಸಬೇಕು. ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಹಾಗೂ ಸೊಳ್ಳೆ ಉತ್ಪತ್ತಿ ನಿವಾರಣೆಯ ಕುರಿತು ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.

ನಗರದಲ್ಲಿ ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸಲು ವಾರಕ್ಕೊಮ್ಮೆ ಸೊಳ್ಳೆ ನಾಶಕ ದ್ರಾವಣ ಸಿಂಪಡಿಸಬೇಕು. ರಸ್ತೆ ಬದಿ ತೆರೆದ ವಾತಾವರಣದಲ್ಲಿ ಹಣ್ಣುಗಳ ಮಾರಾಟ ನಿಷೇಧಿಸಿ, ಹೋಟೆಲ್‌ಗ‌ಳಲ್ಲಿ ಸ್ವತ್ಛತೆ ಕಾಪಾಡುವಂತೆ ನೋಡಿಕೊಳ್ಳಬೇಕು. ನಗರದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು. ನಗರದ ವಿವಿಧ ಕೇಂದ್ರಗಳಿಂದ ನೀರನ್ನು ಸಂಗ್ರಹಿಸಿ ಕಾಲಕಾಲಕ್ಕೆ ತಪಾಸಣೆಗೆ ಒಳಪಡಿಸಬೇಕು ಎಂದು ಹೇಳಿದರು.

Advertisement

ಶಾಲೆ, ಅಂಗನವಾಡಿ ಕೇಂದ್ರಗಳು ಹಾಗೂ ವಸತಿ ನಿಲಯಗಳ ಸುತ್ತ ಮುತ್ತ ವಾತಾವರಣವನ್ನು ಸ್ವಚ್ಛಗೊಳಿಸಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು. ಸಾಂಕ್ರಾಮಿಕ ರೋಗಗಳು ಹಾಗೂ ನಿಯಂತ್ರಣದ ಬಗ್ಗೆ ಪಠ್ಯ ಕ್ರಮದಲ್ಲಿ ಅಳವಡಿಸುವುದು ಹಾಗೂ ರೋಗಗಳು ಹರಡದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಎಚ್ಚರಿಕೆಯ ಕ್ರಮ ವಹಿಸಬೇಕು ಎಂದು ಹೇಳಿದರು.

ಕೈಗಾರಿಕಾ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿದ್ದು, ಕಾರ್ಮಿಕರಿಗೆ ಸೊಳ್ಳೆ ಪರದೆ ಹಾಗೂ ರೆಪಲೆಂಟ್‌ ಗಳ ಉಪಯೋಗ, ಕಿಟಕಿಗಳಿಗೆ ಜಾಲರಿ ಹಾಕುವಂತೆ ತಿಳಿಸಬೇಕು. ಕೈಗಾರಿಕಾ ವಲಯಗಳಿಗೆ ವಲಸೆ ಬರುವ ಕಾರ್ಮಿಕರಿಗೆ ಪ್ರತ್ಯೇಕ ಆರೋಗ್ಯ ಚೀಟಿ ನೀಡಿ ಆರೋಗ್ಯಾಧಿಕಾರಿಗಳು ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದರು.

ಅರಣ್ಯ ವ್ಯಾಪ್ತಿಗಳಲ್ಲಿ ವಾಸಿಸುತ್ತಿರುವ ವನಪಾಲಕರು ಹಾಗೂ ಸಾರ್ವಜನಿಕರಿಗೆ ಕೆಎಫ್‌ಡಿ ನಿಯಂತ್ರಣ ಮತ್ತು ಮುಂಜಾಗ್ರತೆ ಬಗ್ಗೆ ಅರಿವು ಮೂಡಿಸಿ ಅರಣ್ಯ ವ್ಯಾಪ್ತಿಯಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗದಂತೆ ಗಪ್ಪಿ ಮತ್ತು ಗಾಂಬೂಸಿಯಾ ಮೀನು ಮರಿಗಳನ್ನು ಬಿಡಲು ಇಲಾಖೆಗಳೊಂದಿಗೆ ವಿನಿಮಯ ಮಾಡಿಕೊಂಡು ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ, ನಗರ ಸಭೆಗಳು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವಂತಹ ಆರೋಗ್ಯ ಶಿಕ್ಷಣ ನೀಡಿ ರೋಗಗಳ ಹತೋಟಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಅಶ್ವಥ್‌ ಬಾಬು, ತಾಲೂಕು ಆರೋಗ್ಯಧಿಕಾರಿ ಡಾ.ಸೀಮಾ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜ್‌ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next