Advertisement

Chikkodi: ಸಹಕಾರಿ ಸಾಲ ಸಕಾಲಕ್ಕೆ ಮರುಪಾವತಿಸಿ: ಜೊಲ್ಲೆ

05:46 PM Nov 23, 2023 | Team Udayavani |

ಚಿಕ್ಕೋಡಿ: ಸಹಕಾರಿ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತವೆ. ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದು ಅವಶ್ಯಕವಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

Advertisement

ತಾಲೂಕಿನ ಕುಂಗಟೋಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ  ನೂತನ ಆಡಳಿತ ಭವನ ಉದ್ಘಾಟನೆ ಮತ್ತು ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸದಸ್ಯರ ಸಹಕಾರದಿಂದ ಸಂಸ್ಥೆಗಳು ಬೆಳವಣಿಗೆ ಸಾ ಧಿಸುತ್ತವೆ. ಸದಸ್ಯರು ಮತ್ತು ಗ್ರಾಹಕರು ಸಹಕಾರಿ ಸಂಸ್ಥೆಯ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮತ್ತು ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಬಿಡಿಸಿಸಿ ಬ್ಯಾಂಕ್‌ ಮೂಲಕ ಜನರಿಗೆ ಮುಟ್ಟಿಸಲಾಗಿದೆ. ಆದರೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ವಿಫಲರಾಗುತ್ತಿದ್ದೇವೆ ಎಂದರು.

ಬೆಳಗಾವಿ ಜಿಲ್ಲೆಯ 819 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ 134 ಪ್ರಾಥಮಿಕ ಕೃಷಿ ಪತ್ತಿನ ಸಂಘದ ಗೋಡೌನ್‌
ನಿರ್ಮಾಣ ಮಾಡಲು ಶೇ 1ರ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ವಿವಿಧೋದ್ದೇಶ ಸಹಕಾರಿ ಸಂಘದ ಮೂಲಕ ರೈತರಿಗೆ ನೀರಾವರಿಗೆ ಸೌಲಭ್ಯ ಒದಗಿಸಬಹುದು. ಪೇಟ್ರೋಲ್‌ ಪಂಪ್‌ ಹಾಕಬಹುದು. ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸಲು ಸಾಲ ನೀಡಬಹುದಾಗಿದೆ.

ಸಂಸ್ಥೆಯಲ್ಲಿ ಪಡೆದ ಸಾಲ ಮರಳಿ ಪಾವತಿ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು. ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಗ್ಯಾರಂಟಿ ಲೋಕದಲ್ಲಿ ರಾಜ್ಯ ಸರ್ಕಾರ ಮಡ್ಡಿ ಪ್ರದೇಶದ ಜನರಿಗೆ ಅನುಕೂಲವಾಗುವ
ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡುವುದನ್ನು ಮರೆತಿದೆ. ಸಂಸದ ಜೊಲ್ಲೆ ಮತ್ತು ರಮೇಶ ಕತ್ತಿ ಅವರು ಹೆಚ್ಚಿನ ಆಸಕ್ತಿ ವಹಿಸಿ ಈ ಯೋಜನೆ ಪೂರ್ಣವಾಗಲು ನನಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಹೆಸ್ಕಾಂ ಮಾಜಿ ನಿರ್ದೇಶಕ
ಮಹೇಶ ಭಾತೆ, ಸುರೇಶ ಬೆಲ್ಲದ, ಶರತ್‌ ಕವಟಗಿಮಠ, ಕೆಎಲ್‌ಇ ನಿರ್ದೇಶಕ ಬಸವರಾಜ ಪಾಟೀಲ, ಉಪನ್ಯಾಸಕ ಮಹೇಶ ಮದಬಾವಿ, ಶಿವರಾಯ ಕಮತೆ, ಗುಲಾಬ ಹಸನ, ವಿಜಯ ಕೊಠಿವಾಲೆ, ಮಹಾಂತೇಶ ಭಾತೆ ಮುಂತಾದವರು ಇದ್ದರು. ಸಂಸ್ಥೆಯ ಅಧ್ಯಕ್ಷ ಸಂಜಯಗೌಡ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next