Advertisement

ಪರಿಹಾರ ಕಂತಿಗೆ ಸಂತ್ರಸ್ತರ ನಿರೀಕ್ಷೆ

03:13 PM Jan 05, 2020 | Naveen |

ಚಿಕ್ಕೋಡಿ: ನೆರೆಯಲ್ಲಿ ಸಂಪೂರ್ಣ ಬಿದ್ದು ಹೋಗಿರುವ ಮನೆಗಳನ್ನು ಕಟ್ಟಲು ಫಲಾನುಭವಿಗಳು ಮುಂದಾಗಿದ್ದು, ಸರ್ಕಾರ ಬಿಡುಗಡೆ ಮಾಡಿದ ಮೊದಲ ಕಂತಿನ ಪರಿಹಾರದಲ್ಲಿ ತಳಪಾಯ ನಿರ್ಮಿಸಿ ಸರ್ಕಾರದ ಎರಡನೆ ಕಂತಿನ ಪರಿಹಾರದ ಹಣಕ್ಕಾಗಿ ಕಾಯುತ್ತಿದ್ದಾರೆ.

Advertisement

ಕಳೆದ ಆಗಸ್ಟ್‌ ತಿಂಗಳಲ್ಲಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಉಂಟಾದ ಭೀಕರ ಪ್ರವಾಹದಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಜನರು ತತ್ತರಿಸಿ ಹೋಗಿದ್ದರು. ಪ್ರವಾಹದಿಂದ ಧರೆಗೆ ಉರುಳಿದ ಮನೆ ಕಟ್ಟಲು ರಾಜ್ಯ ಸರ್ಕಾರ 5 ಲಕ್ಷ ರೂ. ಘೋಷಣೆ ಮಾಡಿ ಮೊದಲ ಕಂತಾಗಿ 1 ಲಕ್ಷ ರೂ. ಆಯಾ ಫಲಾನುಭವಿಗಳ ಖಾತೆಗೆ ಜಮೆ ಮಾಡಿದೆ. ಒಂದು ಲಕ್ಷ ರೂ. ಪರಿಹಾರದ ಮೊತ್ತದಲ್ಲಿ ಫಲಾನುಭವಿಗಳು ಮನೆ ಕಟ್ಟಲು ಆರಂಭ ಮಾಡಿದ್ದು, ತಳಪಾಯ ಮಟ್ಟದವರೆಗೆ ಮನೆ ಗೋಡೆ ಬಂದಿದೆ. ಈಗ  ಲಾನುಭವಿಗಳ ಕೈಯಲ್ಲಿ ಹಣವಿಲ್ಲ. ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಂತುಕೊಂಡಿದೆ. ಸರ್ಕಾರ ಘೋಷಣೆ ಮಾಡಿದ 5 ಲಕ್ಷ ರೂ. ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಎನ್ನುತ್ತಿದ್ದಾರೆ ಮನೆ ಕಳೆದುಕೊಂಡ ಫಲಾನುಭವಿಗಳು.

ಅರ್ಧಕ್ಕೆ ನಿಂತ ಮನೆಗಳು: ನೆರೆಯಲ್ಲಿ ಸಂಪೂರ್ಣ ಬಿದ್ದು ಹೋಗಿರುವ ಮನೆಗಳನ್ನು ಪುನಃ ಕಟ್ಟಿಕೊಳ್ಳಲು ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಕಳಿಸಲು ಸ್ಥಳೀಯ ಅಧಿಕಾರಿಗಳು ವಿಳಂಬ ಮಾಡಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಸರ್ಕಾರ ಎ ವರ್ಗದ ಫಲಾನುಭವಿಗಳ ಖಾತೆಗೆ 1 ಲಕ್ಷ ರೂ. ಜಮೆ ಮಾಡಿ ಮನೆ ಕಟ್ಟಿಕೊಳ್ಳಲು ಆರಂಭಿಸಬೇಕೆಂದು ಸೂಚನೆ ನೀಡಿದ್ದರು.

ಹೀಗಾಗಿ ಎ ವರ್ಗದ ಫಲಾನುಭವಿಗಳು ಮನೆ ನಿರ್ಮಾಣ ಆರಂಭಿಸಿದ್ದರು. ಮುಂದಿನ ಹಂತ ಕಟ್ಟಲು ಕೈಯಲ್ಲಿ ದುಡ್ಡಿಲ್ಲ, ಸರ್ಕಾರ ಎರಡನೇ ಕಂತಿನ ಪರಿಹಾರದ ಮೊತ್ತ ಜಮೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸಂಪೂರ್ಣ ಬಿದ್ದ 498 ಮನೆಗಳು: ಪ್ರವಾಹದಲ್ಲಿ ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರ, ಚೆಂದೂರ, ಇಂಗಳಿ, ಮಾಂಜರಿ, ಸದಲಗಾ, ಅಂಕಲಿ, ಯಡೂರವಾಡಿ, ಚೆಂದೂರ ಟೆಕ್‌, ಹಳೆ ಯಡೂರ ಮುಂತಾದ ಗ್ರಾಮಗಳಲ್ಲಿ ಸುಮಾರು 498 ಫಲಾನುಭವಿಗಳ ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ಈ ಎಲ್ಲ ಫಲಾನುಭವಿಗಳಿಗೆ ಹೊಸ ಮನೆ ಕಟ್ಟಿಸಿಕೊಳ್ಳಲು ರಾಜ್ಯ ಸರ್ಕಾರ 5 ಲಕ್ಷ ರೂ. ಘೋಷಣೆ ಮಾಡಿ ಮೊದಲ ಕಂತಾಗಿ 1 ಲಕ್ಷ ರೂ. ಬಿಡುಗಡೆ ಮಾಡಿದೆ. “ಬಿ’ ಕೆಟಗೆರಿಯಲ್ಲಿ 1223 ಮನೆಗಳು ಸೇರ್ಪಡೆಗೊಂಡಿದ್ದು, ಈ ಫಲಾನುಭವಿಗಳಿಗೂ ಸರ್ಕಾರ 1 ಲಕ್ಷ ರೂ. ಜಮೆ ಮಾಡಿದೆ. “ಸಿ’ ಕೆಟಗರಿಯಲ್ಲಿ 4698 ಮನೆಗಳು ಹಾಳಾಗಿದ್ದು, ಇವರಿಗೂ ಸರ್ಕಾರ 50 ಸಾವಿರ ರೂ. ಪರಿಹಾರ ನೀಡಿದೆ. ಅದರಂತೆ ನಿಪ್ಪಾಣಿ ತಾಲೂಕಿನಲ್ಲಿ 433 “ಎ’ ಕೆಟಗರಿ, 764 “ಬಿ’ ಕೆಟಗರಿ, 1894 “ಸಿ’ ಕೆಟಗರಿ ಒಟ್ಟು 3091 ಮನೆಗಳು ಹಾಳಾಗಿವೆ.

Advertisement

ನೆರೆ ಪರಿಹಾರಕ್ಕೆ ಕತ್ತರಿ?: ಪ್ರಾರಂಭದಲ್ಲಿ “ಎ’ ಕೆಟಗರಿ ಫಲಾನುಭವಿಗಳಿಗೆ ಮಾತ್ರ 5 ಲಕ್ಷ ರೂ. ಘೋಷಣೆ ಮಾಡಿದ್ದ ಸರ್ಕಾರ ನಂತರ “ಬಿ’ ಕೆಟಗರಿ ಫಲಾನುಭವಿಗಳಿಗೂ 5 ಲಕ್ಷ ರೂ. ಘೋಷಣೆ ಮಾಡಿತ್ತು. “ಬಿ’ ಕೆಟಗರಿ ಫಲಾನುಭವಿಗಳಿಗೆ 3 ಲಕ್ಷ ರೂ. ಪರಿಹಾರ ನೀಡಲು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿದ್ದರಿಂದ ಫಲಾನುಭವಿಗಳ ಎದೆಯಲ್ಲಿ ದುಗುಡ ಆರಂಭವಾಗಿದೆ. ಈ ಕುರಿತು ಅ ಧಿಕೃತ ಯಾವುದೇ ಮಾಹಿತಿ ಹೊರ ಬಿದ್ದಿಲ್ಲವಾದರೂ ಸರ್ಕಾರದಲ್ಲಿ ಚರ್ಚೆ ಮಾತ್ರ ನಡೆಯುತ್ತಿದೆ.

ಕೃಷ್ಣಾ ನದಿ ಮಹಾಪೂರದಲ್ಲಿ ನಮ್ಮ ಮನೆ ಸಂಪೂರ್ಣ ಬಿದ್ದು ಹೋಗಿತ್ತು. ಸರ್ಕಾರ ನೀಡಿದ 1 ಲಕ್ಷ ರೂ.ದಲ್ಲಿ ಮನೆ ಕಟ್ಟಲು ಆರಂಭಿಸಿ ಈಗ ಅರ್ಧಕ್ಕೆ ನಿಂತುಕೊಂಡಿದೆ. ಎರಡನೆ ಕಂತಿನ ಪರಿಹಾರ ಬರುವಿಕೆಗಾಗಿ ಎದುರು ನೋಡಲಾಗುತ್ತಿದೆ. ಶೀಘ್ರ ಐದು ಲಕ್ಷ ರೂ. ಪರಿಹಾರ ನೀಡಿದರೆ ಮನೆ ಪೂರ್ಣಗೊಳಿಸಲು ಅನುಕೂಲವಾಗುವುದು.
ಅಪ್ಪಾಸಾಹೇಬ ಅದುಕೆ ಚೆಂದೂರ,
ಸಂತ್ರಸ್ತ

ನೆರೆಯಲ್ಲಿ ಬಿದ್ದು ಹೊದ ಮನೆಗಳ ನಿರ್ಮಾಣಕ್ಕೆ ಸರ್ಕಾರ 1 ಲಕ್ಷ ರೂ. ನೀಡಿದೆ. ಉಳಿದ ಪರಿಹಾರ ತಕ್ಷಣ ನೀಡಬೇಕೆಂದು ಡಿಸಿ ಮತ್ತು ಹೌಸಿಂಗ್‌ ಬೋರ್ಡ್‌ಗೆ ಮನವಿ ಮಾಡಲಾಗಿದೆ. “ಎ’ ಮತ್ತು “ಬಿ’ ಕೆಟಗರಿ ಫಲಾನುಭವಿಗಳಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಕಡಿತ ಮಾಡದೇ ನೀಡಬೇಕು.
ಗಣೇಶ ಹುಕ್ಕೇರಿ,
ಶಾಸಕ

ನೆರೆಯಲ್ಲಿ ಬಿದ್ದು ಹೋದ ಮನೆಗಳ “ಎ’ ಮತ್ತು “ಬಿ’ ಕೆಟಗರಿ ಫಲಾನುಭವಿಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕಟ್ಟಿದ ಮನೆ ಜಿಪಿಎಸ್‌ ಆದ ಮೇಲೆ ಹೌಸಿಂಗ್‌ ಬೋರ್ಡ್‌ ಉಳಿದ ಪರಿಹಾರ ನೀಡುತ್ತದೆ.
ರವೀಂದ್ರ ಕರಲಿಂಗನ್ನವರ,
ಉಪವಿಭಾಗಾ ಧಿಕಾರಿ ಚಿಕ್ಕೋಡಿ

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next