Advertisement

ಗಣಪತಿ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ: ಕೋಮು ಸೌಹಾರ್ದ ಸಂದೇಶ ಸಾರುವ ಅಲ್ಲಾಬಕ್ಷ

06:32 PM Sep 07, 2021 | Team Udayavani |

ಚಿಕ್ಕೋಡಿ: ಹಿಂದೂ -ಮುಸ್ಲಿಂ ಧರ್ಮದ ನಡುವೆ ಮೇಲಿಂದ ಮೇಲೆ ಘರ್ಷಣೆ ನಡೆದು ಸ್ವಾಸ್ಥ್ಯ ಹಾಳಾಗುವುದು ಕಂಡಿದೇವೆ. ಆದರೆ ಮುಸ್ಲಿಂ ಕುಟುಂಬವೊಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಡಿ ಭಾಗದಲ್ಲಿ ಕೋಮು ಸೌಹಾರ್ದ ಸಂದೇಶ ಸಾರುತ್ತಿದೆ.

Advertisement

ಕೃಷ್ಣಾ ನದಿ ತೀರದ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಕಳೆದ 60 ವರ್ಷಗಳಿಂದ ಪ್ರತಿ ವರ್ಷ ಗಣೇಶ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡು ಹಿಂದೂ -ಮುಸ್ಲಿಂ ಬೇಧ-ಭಾವವಿಲ್ಲದೇ ಭಾವ್ಯಕ್ಯತೆ ಮೆರೆಯುತ್ತಿದೆ.

ಗ್ರಾಮದ ಅಲ್ಲಾಬಕ್ಷ ಜಮಾದಾರ ಕುಟುಂಬ ಪ್ರತಿ ವರ್ಷ ನೂರಾರು ಗಣಪತಿ ಮೂರ್ತಿ ತಯಾರಿಸಿ ಭಕ್ತಾಧಿಗಳಿಗೆ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಮೂಲತ: ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿರುವ ಅಲ್ಲಾಬಕ್ಷ ಜಮಾದಾರ ಅವರು ತಮ್ಮ ಬಿಡುವಿನ ಸಮಯದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದ್ದಂತೆ ಜಮಾದಾರ ಕುಟುಂಬ ಬಣ್ಣ ಬಣ್ಣದ ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಜಾತಿ-ಭೇದಭಾವ ಬದಿಗಿಟ್ಟು ತಲೆಗೆ ಟೋಪಿ ಧರಿಸಿ ಝಗಮಗಿಸುವ ಬಣ್ಣ ಬಣ್ಣಗಳಿಂದ ವಿಘ್ನೇಶ್ವರ ಮೂರ್ತಿ ತಯಾರಿಸುವ ಕಾಯಕ ತೃಪ್ತಿದಾಯಕ ತಂದಿದೆ ಎನ್ನುತ್ತಾರೆ ಅಲ್ಲಾಬಕ್ಷ ಜಮಾದಾರ.

ಈ ಮೊಹಮ್ಮದ್ ಜಮಾದಾರ್ ಅವರು ತನ್ನ ಸಹೋದರನ ಜೊತೆಗೂಡಿ ಗಣೇಶ ಚತುರ್ಥಿ ಹಬ್ಬ ಬಂದಾಗ ಕಳೆದ ಎರಡು ತಿಂಗಳಿಂದ ಗಣಪತಿ ವಿಗ್ರಹಗಳನ್ನು ತಯಾರು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ 60 ವರ್ಷಗಳಿಂದ ಅಜ್ಜ-ಮುತ್ತಜ್ಜನ ಕಾಲದಿಂದ ಬಂದಿರುವ ಕಾಯಕವನ್ನು ಮೊಹಮ್ಮದ ಜಮಾದಾರ ಕುಟುಂಬ ಮುಂದುವರೆಸಿಕೊಂಡು ಹೋಗುತ್ತಿದೆ. ಯಾರು ಏನೇ ಹೇಳಿದರೂ ಜಾತಿ ಮತದ ಬಗ್ಗೆ ಪ್ರಸ್ತಾಪ ಮಾಡಿದರೂ ಅದನ್ನು ತಲೆಯಲ್ಲಿ ಹಾಕಿಕೊಳ್ಳದೇ ಇಡೀ ಕುಟುಂಬ ಗಣಪತಿಯನ್ನು ತಯಾರಿಸಿಕೊಂಡು ಬರುತ್ತಿದೆ.

Advertisement

ಜಮಾದಾರ ಕುಟುಂಬ ತಯಾರು ಮಾಡುವ ಗಣಪತಿ ಮೂರ್ತಿಗಳಿಗೆ ಗಡಿ ಭಾಗದಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರ, ಯಡೂರವಾಡಿ, ಶಿರಗುಪ್ಪಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಗಣೇಶ ಮೂರ್ತಿಗಳನ್ನು ಪೂಜೆಗೆ ತೆಗೆದುಕೊಂಡು ಹೋಗುತ್ತಾರೆ. ಪ್ರಸಕ್ತ ವರ್ಷದಲ್ಲಿ ಜಮಾದಾರ ಕುಟುಂಬ ಸುಮಾರು 250 ರಿಂದ 300 ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಗಣೇಶ ಚೌತಿ ಹಬ್ಬದ ಮುನ್ನಾ ದಿನ ಗಣೇಶ ಮೂರ್ತಿಗಳ ಅಂತಿಮ ಕೆಲಸ ಮುಕ್ತಾಯವಾಗಲಿದೆ ಎಂದು ಜಮಾದಾರ ಅತೀ ಉತ್ಸಾಹದಿಂದ ಅನಿಸಿಕೆ ಹಂಚಿಕೊಂಡರು.

ಗಣೇಶ ಚತುರ್ಥಿಗೂ ಎರಡು ತಿಂಗಳು ಮುಂಚೆಯೇ ಜಮಾದಾರ್ ಕುಟುಂಬಸ್ಥರು ಗಣಪತಿ ಮೂರ್ತಿ ತಯಾರಿಸುವ ಕೆಲಸ ಶುರು ಮಾಡುತ್ತಾರೆ. ಒಬ್ಬರು ಮಣ್ಣು ಹದ ಮಾಡಿದರೆ, ಇನ್ನೊಬ್ಬರು ಮೂರ್ತಿಗೆ ಬೇಕಾದ ಸೊಂಡಿಲು, ಕೈ, ಹಾಗೂ ಕೀರೀಟ ತಯಾರು ಮಾಡ್ತಾರೆ. ಮನೆಯ ಹೆಣ್ಣು ಮಕ್ಕಳೂ ಸಹ ಈ ಗಣೇಶ ಮೂರ್ತಿ ತಯಾರು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬರೂ ಸಹ ಒಂದೊಂದು ಕೆಲಸ ಅಂತ ಹಂಚಿಕೊಂಡು ಗಣೇಶ ಚತುರ್ಥಿಗೆ ಭಕ್ತರಿಗೆ ಬೇಕಾದ ರೀತಿಯಲ್ಲಿ ವಿವಿಧ ಅಳತೆ, ಗಾತ್ರದ ಸುಂದರ ಮೂರ್ತಿಗಳನ್ನು ತಯಾರು ಮಾಡುತ್ತಿರುವ ಮುಸ್ಲಿಂ ಕುಟುಂಬದ ಕಾಯಕಕ್ಕೆ ಗಡಿ ಭಾಗದ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಹಿಂದೂ-ಮುಸ್ಲಿಂ ಬೇಧಭಾವವಿಲ್ಲದೆ ಭಾವ್ಯಕ್ಯತೆಯಿಂದ ಗಣೇಶ ಮೂರ್ತಿ ತಯಾರಿಸಿ ಭಕ್ತರಿಗೆ ಮಾರಾಟ ಮಾಡಲಾಗುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶದ ಭಕ್ತರು ನಮ್ಮ ಕಡೆಯಿಂದ ಮೂರ್ತಿ ಖರೀದಿಸುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಗಣಪತಿ ಮೂರ್ತಿ ತಯಾರಕ ಕಲಾವಿಧ ಅಲ್ಲಾಬಕ್ಷ ಜಮಾದಾರ.

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next