Advertisement

ಸಂಪ್ರದಾಯ ಬದಿಗೊತ್ತಿ ವಿಧವೆಯರಿಂದ ಗೃಹ ಪ್ರವೇಶ 

04:43 PM Oct 20, 2018 | Team Udayavani |

ಚಿಕ್ಕೋಡಿ: ಮನೆ ನಿರ್ಮಿಸಿ ವಾಸ್ತು ಪೂಜೆ ನೆರವೇರಿಸಲು ಪೂಜೆ ಪುನಸ್ಕಾರ ನೆರವೇರಿಸಿ ಮಂಗಳಕರ ಧಾರ್ಮಿಕ ವಿಧಿ ವಿಧಾನಗಳು ನಡೆಸುವುದು ಸಾಮಾನ್ಯ. ಎಲ್ಲರೂ ನಂಬಿಕೊಂಡು ಬಂದ ಸಂಪ್ರದಾಯ. ಆದರೆ ಇಲ್ಲೊಬ್ಬರು ವಿಧವೆಯರಿಗೆ ಮಹಾನ್‌ ಪುರುಷರ ಭಾವಚಿತ್ರ ನೀಡಿ ಅವರಿಂದ ಗೃಹ ಪ್ರವೇಶ ಮಾಡುವ ಮೂಲಕ ವಿಧವೆಯರನ್ನು ಸಮಾಜ ಮುಖ್ಯವಾಹಿನಿಗೆ ತರಲು ವಿನೂತನ ಕಾರ್ಯ ಮಾಡಿದ್ದಾರೆ.

Advertisement

ಅಂಕಲಿ ಗ್ರಾಮದ ಸಮೀಪದಲ್ಲಿರುವ ರಾಯಬಾಗ ತಾಲೂಕಿನ ಬಾವನ ಸೌದತ್ತಿ ಗ್ರಾಮದ ರಾಜು ಮರಿನಾಯಿಕ ಎಂಬವರು ಹೊಸ ಮನೆ ನಿರ್ಮಿಸಿದ್ದು, ಅದರ ವಾಸ್ತು ಶುಕ್ರವಾರ ಹಮ್ಮಿಕೊಂಡಿದ್ದರು. ಇದಕ್ಕಾಗಿ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಬದಿಗೊತ್ತಿದ ಅವರು, ಅಮಂಗಲಕರವೆಂದು ಭಾವಿಸಲಾದ ವಿಧವೆಯರ ಗೃಹ ಪ್ರವೇಶಕ್ಕೆ ಪ್ರಾತಿನಿಧ್ಯ ನೀಡಿದ್ದಾರೆ.  ರಾಜು ಮರಿನಾಯಿಕ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು. ನಂತರ ರಾಜು ಮರಿನಾಯಿಕ ಮನೆಗೆ ಆಗಮಿಸಿದ ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಮೂಢನಂಬಿಕೆ ನಿವಾರಿಸಲು ಅನೇಕ ಮಹಾತ್ಮರು ಹೋರಾಟ ಮಾಡಿದ್ದಾರೆ. ಆದರೂ ನಮ್ಮ ಜನ ಇವುಗಳ ಮೇಲೆ ಅಗಾಧ ನಂಬಿಕೆ ಇಟ್ಟುಕೊಂಡಿದ್ದು, ಇದನ್ನು ಹೋಗಲಾಡಿಲು ಇಂತಹ ವಿಶಿಷ್ಟ ಕಾರ್ಯಗಳು ನಡೆಯುವ ಮೂಲಕ ಯುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದರು.

ಬುದ್ಧ, ಬಸವ, ಅಂಬೇಡ್ಕರ್‌ ಆದರ್ಶಗಳನ್ನು ಪಾಲನೆ ಮಾಡಿದ್ದೇ ಆದರೆ ಧರ್ಮಗಳ ಮಧ್ಯೆ ಸಂಘರ್ಷ ನಡೆಯುತ್ತಿರಲಿಲ್ಲ, ಅವರ ವಿಚಾರ, ಆದರ್ಶಗಳನ್ನು ತಿಳಿಸುವ ಉದ್ದೇಶದಿಂದ ಮಾನವ ಬಂಧುತ್ವ ವೇದಿಕೆ ಮೂಲಕ ಮೂಡನಂಭಿಕೆ ತೆಗೆದುಹಾಕುವ ಕಾರ್ಯಗಳು ನಡೆಯುತ್ತಿವೆ. ಸ್ಮಶಾನ ಕಾರ್ಯಕ್ರಮ, ಪುರೋಹಿತರು ಇಲ್ಲದೇ ಗೃಹ ಪ್ರವೇಶ, ಅಮವಾಸ್ಯೆ ದಿನ ಅಭಿವೃದ್ಧಿ ಕಾರ್ಯಗಳ ಚಾಲನೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಮನೆ ವಾಸ್ತು ಪೂಜೆಗೆ ಮಾಡುವ ವೆಚ್ಚವನ್ನು ಕಡಿಮೆ ಮಾಡಿ ಅದೇ ಹಣದಲ್ಲಿ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಬೇಕು ಎಂದರು. ಈರಗೌಡ ಪಾಟೀಲ, ಮಹಾವೀರ ಮೋಹಿತೆ, ದುಳಗೌಡ ಪಾಟೀಲ, ಸದಾಶಿವ, ರಾಜು ನಾಯ್ಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next