ಚಿಕ್ಕೋಡಿ: ಭವಿಷ್ಯತ್ತಿನಲ್ಲಿ ಚಿಕ್ಕೋಡಿ ಜಿಲ್ಲೆಯಾಗುವುದು ಶತಸಿದ್ಧ. ಹೀಗಾಗಿ ಚಿಕ್ಕೋಡಿ ಜಿಲ್ಲೆಯಾಗಲು ಬೇಕಾದ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಬರುವ ಎರಡು ತಿಂಗಳೊಳಗಾಗಿ ಚಿಕ್ಕೋಡಿ ನಗರದ ಅಭಿವೃದ್ಧಿಗೆ ವಿಶೇಷ 40 ಕೋಟಿ ರೂ. ಅನುದಾನ ಬರಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಇಂದಿರಾ ನಗರ ಕ್ರಾಸ್ ಹತ್ತಿರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದಿ.ದೇವರಾಜ ಅರಸು ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಚಿಕ್ಕೋಡಿ ಜಿಲ್ಲೆಯಾಗುತ್ತದೆಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಈಗಾಗಲೇ ಬಹುತೇಕ ಜಿಲ್ಲಾ ಮಟ್ಟದ ಕಚೇರಿ ಮಂಜೂರು ಮಾಡಿಸಿ ಕಾರ್ಯಾರಂಭಗೊಳಿಸಿದ್ದಾರೆ. ಉಳಿದ ಇಲಾಖೆ ತಂದು ಜಿಲ್ಲೆಯಾಗಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಕಳೆದೆರಡು ವರ್ಷದಿಂದ ಮೂರು ವರ್ಷವಾದರೂ ಚಿಕ್ಕೋಡಿ ನಗರಕ್ಕೆ ಅನುದಾನ ಬಂದಿಲ್ಲ.
ಹೀಗಾಗಿ ಚಿಕ್ಕೋಡಿ ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಿಕ್ಕೋಡಿ ನಗರಕ್ಕೆ ಏನೇನು ಬೇಕೆಂಬುದು ಪುರಸಭೆ ಎಲ್ಲ ಸದಸ್ಯರು ಚರ್ಚಿಸಿ ಹೇಳಿದರೇ ಆ ರೀತಿ ಅನುದಾನ ಖರ್ಚು ಮಾಡಲಾಗುತ್ತದೆ ಎಂದರು.
ದಿ. ದೇವರಾಜ ಅರಸು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಜಾಗವಿದ್ದರೂ ಕಟ್ಟಡ ಕೊರತೆಯಾಗಿತ್ತು. ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಸರ್ಕಾರ 1.17 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದೆ. ಮೊದಲ ಕಂತಾಗಿ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಬರುವ 8 ತಿಂಗಳ ಅವಧಿ ಯೊಳಗೆ ಕಚೇರಿ ಕಟ್ಟಡ ಕಾಮಗಾರಿ ಮುಕ್ತಾಯವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಚಿಕ್ಕೋಡಿ ವೇಗವಾಗಿ ಬೆಳೆಯುತ್ತಿರುವ ನಗರ. ಈಗಾಗಲೇ ಶೈಕ್ಷಣಿಕ ಜಿಲ್ಲೆ ಸ್ಥಾನ ಹೊಂದಿರುವ ಚಿಕ್ಕೋಡಿ ಆಡಳಿತಾತ್ಮಕ ಜಿಲ್ಲೆಯನ್ನಾಗಿ ಘೋಷಿಸುವುದು ಬಾಕಿ ಇದೆ. ಶಾಸಕ ಗಣೇಶ ಹುಕ್ಕೇರಿ ಹೆಚ್ಚಿನ ಮುತುವರ್ಜಿವಹಿಸಿ ಜಿಲ್ಲೆ ಘೋಷಣೆ ಮಾಡಬೇಕು ಎಂದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ, ನರೇಂದ್ರ ನೇರ್ಲಿಕರ, ಪುರಸಭೆ ಸದಸ್ಯರಾದ ಸಾಭೀರ ಜಮಾದಾರ, ಗುಲಾಬ ಬಾಗವನಾ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ನಸಲಾಪೂರೆ, ಮುದ್ದಸರ ಜಮಾದಾರ, ಉದ್ಯಮಿ ರವಿ ಹಂಪನ್ನವರ, ಅನಿಲ ಮಾನೆ, ಪಿರೀಜ ಕಲಾವಂತ ಇತರರಿದ್ದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಸ್.ಪಿ. ಸೌಧಗಾರ ಸ್ವಾಗತಿಸಿ, ವಂದಿಸಿದರು.