Advertisement

ಅನುದಾನ ಕೊರತೆ: ಕೋರ್ಟ್‌ಗೆ ಹೊಸ ಕಟ್ಟಡ ಭಾಗ್ಯ ಮರೀಚಿಕೆ

12:30 PM Jan 10, 2021 | Team Udayavani |

ಚಿಕ್ಕೋಡಿ: ಸಂವಿಧಾನ ಬರೆದ ಡಾ.ಅಂಬೇಡ್ಕರ ವಾದ ಮಂಡಿಸಿದ ನ್ಯಾಯಾಲಯಕ್ಕೆ ಹೈಟಿಕ್‌ ಸ್ಪರ್ಶ ನೀಡಲು ಸರ್ಕಾರ ಮುಂದಾಗಿದೆ. ಆದರೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮೂರು ವರ್ಷ ಕಳೆದರೂ ಹೊಸ ಕಟ್ಟಡ ಭಾಗ್ಯ ಮರೀಚಿಕೆಯಾಗಿದೆ.

Advertisement

ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಹೈಟೆಕ್‌ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ 32 ಕೋಟಿ ರೂ. ಕ್ರಿಯಾಯೋಜನೆ ರೂಪಿಸಿದೆ. ಕಳೆದ 2018ರಲ್ಲಿ ಹೊಸ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ
ನೆರವೇರಿಸಿದೆ. ಆದರೆ ಇಲ್ಲಿಯವರಿಗೆ ಕಟ್ಟಡ ಕಾಮಗಾರಿ ಆರಂಭಿಸದೇ ಇರುವುದು ದುರ್ದೈವದ ಸಂಗತಿ.

ಜಿಲ್ಲಾ ಘೋಷಣೆಗೆ ತುದಿಗಾಲ ಮೇಲೆ ನಿಂತಿರುವ ಚಿಕ್ಕೋಡಿ ನಗರದಲ್ಲಿ ಹೈಟೆಕ್‌ ನ್ಯಾಯಾಲಯದ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ ಮೊದಲು ಹಂತದಲ್ಲಿ 19 ಕೋಟಿ ರೂ. ಮಂಜೂರು ನೀಡಿತ್ತು. ಆದರೆ ಮತ್ತೂಮ್ಮೆ ಕ್ರಿಯಾ ಯೋಜನೆ ರೂಪಿಸಿದಾಗ
32 ಕೋಟಿ ರೂ.ಗೆ ಅನುದಾನ ಹೆಚ್ಚಿಸಿದೆ. ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿಕೊಟ್ಟಿದೆ. ಒಂದು ವರ್ಷದಲ್ಲಿ ಕಟ್ಟಡ ಕಾಮಗಾರಿ ಮುಗಿಸಿಯೇ ಬಿಡುತ್ತೇವೆಂದು ಭರವಸೆ ನೀಡಿದ ಲೋಕೋಪಯೋಗಿ ಇಲಾಖೆ ಈಗ ಸುಮ್ಮನಾಗಿದೆ. ನ್ಯಾಯಾಲಯದ ಕಟ್ಟಡ ಕಾಮಗಾರಿ ನನೆಗುದಿಗೆ ಜನಪ್ರತಿನಿಧಿ ಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎನ್ನುತ್ತಾರೆ ವಕೀಲರು.

ಸುಸಜ್ಜಿತ ಕಟ್ಟಡದ ಗುರಿ: ಸಂವಿಧಾನ ಬರೆದ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಚಿಕ್ಕೋಡಿ ನ್ಯಾಯಾಲಯಕ್ಕೆ ಬಂದು ವಾದ ಮಂಡಿಸಿದ ಹಿನ್ನೆಲ್ಲೆಯಲ್ಲಿ ರಾಜ್ಯದಲ್ಲಿಯೇ ಮಾದರಿ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಇದರಿಂದ ನಗರದ ಹೃದಯ ಭಾಗದಲ್ಲಿ ಇರುವ ಈಗಿನ ನ್ಯಾಯಾಲಯದ ಆವರಣದಲ್ಲಿಯೇ ಎರಡು ಎಕರೆ ಜಾಗದಲ್ಲಿ ಐದು ಕೋರ್ಟ್‌ ಹಾಲ್‌, ವಕೀಲರ ಸಂಘದ ಕಚೇರಿ, ಗ್ರಂಥಾಲಯ ಸೇರಿದಂತೆ ಮುಂದಿನ 15 ರಿಂದ 20 ವರ್ಷದ ಭವಿಷ್ಯದಲ್ಲಿ
ಅನುಕೂಲವಾಗುವ ಹಾಗೆ ನೂತನ ಕಟ್ಟಡ ನಿರ್ಮಾಣ ಮಾಡಲು ರಾಜ್ಯ ಸರ್ಕಾರ 32 ಕೋಟಿ ರೂ. ಮಂಜೂರು ನೀಡಿದೆ.

ಶಿಥಿಲಾವಸ್ಥೆಯಲ್ಲಿ ಕಟ್ಟಡ: ಈಗಾಗಲೇ ಚಿಕ್ಕೋಡಿ ನಗರದಲ್ಲಿ ಏಳನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ಹಿರಿಯ ದಿವಾಣಿ ನ್ಯಾಯಾಲಯ, ಪ್ರಥಮ ದಿವಾಣಿ ನ್ಯಾಯಾಲಯ, ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ, ಎರಡನೆ ಹೆಚ್ಚುವರಿ ದಿವಾಣಿ
ನ್ಯಾಯಾಲಯ ಹೀಗೆ ಐದು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತವೆ. ಎರಡರಿಂದ ಮೂರು ನ್ಯಾಯಾಲಯದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ಕಂಡಿವೆ. ಕಳೆದ ನಾಲ್ಕೈದು ವರ್ಷದ ಹಿಂದೆ ನ್ಯಾಯಾಧೀಶರು ಕುಳಿತುಕೊಳ್ಳುವ ಆಸನದ ಮೇಲ್ಭಾಗದಲ್ಲಿ ಛಾವಣಿ ಕುಸಿತು ಕಂಡು ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ಹೊಸ ಕಟ್ಟಡ ಕಾಮಗಾರಿ ಆರಂಭಿಸಲು ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ಮನಸ್ಸು ಮಾಡಿದೆ. ಆದರೂ ಹೊಸ ಕಟ್ಟಡದ ಕಾಮಗಾರಿ ಆರಂಭವಾಗದಿರುವುದಕ್ಕೆ ನಮಗೂ ಬೇಸರ ಮೂಡಿಸಿದೆ ಎನ್ನುತ್ತಾರೆ ಚಿಕ್ಕೋಡಿ ವಕೀಲರ ಸಂಘದ ಅಧ್ಯಕ್ಷ ನಾಗೇಶ ಕಿವಡ.

Advertisement

ಸುಂದರ ಹಾಗೂ ಸುಸಜ್ಜಿತ ನ್ಯಾಯಾಲಯ ಕಟ್ಟಡ ನಿರ್ಮಿಸಲು ಸರ್ಕಾರ ಹಾಗೂ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಆದರೂ ಹೊಸ ಕಟ್ಟಡ ಕಾಮಗಾರಿ ಭಾಗ್ಯ ಆರಂಭವಾಗಿಲ್ಲ, ಕಾರಣ ತಿಳಿದಿಲ್ಲ.

– ಕಲ್ಮೇಶ ಕಿವಡ, ಉಪಾಧ್ಯಕ್ಷರು, ರಾಜ್ಯ ವಕೀಲರ ಪರಿಷತ್‌ ಬೆಂಗಳೂರು.

– ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next