ಚಿಕ್ಕಮಗಳೂರು: 6ನೇ ವೇತನ ಆಯೋಗ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಅನಿದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಬುಧವಾರ ಬೆಳಗ್ಗೆಯಿಂದಲೇ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಇಡೀ ನಿಲ್ದಾಣವೇ ಸ್ತಬ್ದಗೊಂಡಿತ್ತು. ವಿದ್ಯಾರ್ಥಿಗಳು, ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸಬೇಕಾದ ಪ್ರಯಾಣಿಕರು ಕೆಲಹೊತ್ತು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರಕ್ಕೆ ಕೆರೆಕೊಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗದಂತೆ ಖಾಸಗಿ ಬಸ್, ಟಿಟಿ ವಾಹನ, ಟ್ಯಾಕ್ಸಿಗಳನ್ನು ನಿಯೋಜನೆಗೊಳಿಸಿದ್ದರಿಂದ ಪ್ರಯಾಣಿಕರು ತಾವು ಸೇರಬೇಕಾದ ಸ್ಥಳವನ್ನು ನಿರಾಯಾಸವಾಗಿ ಸೇರಿಕೊಂಡರು.
ಜಿಲ್ಲೆ ಸೇರಿದಂತೆ ಬೆಂಗಳೂರು, ಶಿವಮೊಗ್ಗ, ಹಾಸನ, ಮಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ನಿತ್ಯಸಂಚಾರ ನಡೆಸುತ್ತಿದ್ದ 115 ಖಾಸಗಿ ಬಸ್‌ಗಳ ಜತೆಗೆ ಜಿಲ್ಲಾಡಳಿತ ನಿಯೋಜಿಸಿದ್ದ 60 ರಿಂದ 70 ಖಾಸಗಿ ಬಸ್ ಹಾಗೂ ವಾಹನಗಳು ಕಾರ್ಯ ನಿರ್ವಹಿಸಿದವು. ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ಮಾಹಿತಿಯನ್ನು ಮೊದಲೇ ಅರಿತಿದ್ದ ಸಾರ್ವಜನಿಕರು ಬಸ್ ನಿಲ್ದಾಣದತ್ತ ಮುಖ ಮಾಡಿರಲಿಲ್ಲ, ಇದರಿಂದ ಇಡೀ ಬಸ್ ನಿಲ್ದಾಣವೇ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಲ್ದಾಣದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಖಾಸಗಿ ಬಸ್‌ಗಳ ದರ್ಬಾರು: ರಾಜ್ಯ ರಸ್ತೆ ಸಾರಿಗೆ ನೌಕರರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಖಾಸಗಿ ಬಸ್ ನಿಯೋಜನೆ ಮಾಡಿದ ಹಿನ್ನೆಲೆಯಲ್ಲಿ ಇಡೀ ಬಸ್ ನಿಲ್ದಾಣವೇ ಖಾಸಗಿ ಬಸ್ ದರ್ಬಾರು ನಡೆಸಿದವು.
ಪ್ರಯಾಣಿಕರ ಸಂಖ್ಯೆ ವಿರಳ: ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ ಸರ್ಕಾರಿ ಬಸ್ ನಿಲ್ದಾಣಗಳತ್ತ ಪ್ರಯಾಣಿಕರು ಮುಖ ಮಾಡಿರಲಿಲ್ಲ. ಪರಿಣಾಮ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಸಾರಿಗೆ ಸೇವೆ ಒದಗಿಲು ಜಮಾಯಿಸಿದ್ದ ಖಾಸಗಿ ಬಸ್‌ಗಳು ಸರತಿ ಸಾಲಿನಲ್ಲಿ ನಿಂತಿದ್ದವಾದರೂ ಈ ಬಸ್‌ಗಳು ಪ್ರಯಾಣಿಕರಿಲ್ಲದೇ ಬಣಗುಡುತ್ತಿದ್ದವು. ಬಸ್ ಚಾಲಕರು, ನಿರ್ವಾಹಕರು ನಿಲ್ದಾಣದತ್ತ ಆಗಮಿಸುತ್ತಿದ್ದವರನ್ನು ಕೂಗಿ ಕರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೂಡಿಗೆರೆ, ಶೃಂಗೇರಿ, ಕಡೂರು, ತರೀಕೆರೆ, ಕೊಪ್ಪ, ನರಸಿಂಹರಾಜಪುರ, ಅಜ್ಜಂಪುರದತ್ತ ಹೊರಟಿದ್ದ ಖಾಸಗಿ ಬಸ್‌ಗಳಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಕಂಡು ಬಂದರು.
ಬಿಗಿ ಪೊಲೀಸ್ ಬಂದೋಬಸ್ತ್: ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಖಾಲಿ ಖಾಲಿ ಪ್ಲಾಟ್‌ಫಾರಂಗಳಲ್ಲಿ ಪ್ರಯಾಣಿಕರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇಡೀ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ನಿಲ್ದಾಣ ಆವರಣದಲ್ಲಿದ್ದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಇಲ್ಲದೇ ಬಿಕೋ ಎನ್ನುತ್ತಿದ್ದವು. ರಸ್ತೆ ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರದ ಬಿಸಿ ಇಲಾಖೆಗೆ ತಟ್ಟಿದೆ. ಕಾಫಿನಾಡಿನಲ್ಲಿ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದ್ದು, ಜಿಲ್ಲಾದ್ಯಂತ ಸರ್ಕಾರಿ ಸಾರಿಗೆ ಸೇವೆ ಸ್ತಬ್ದಗೊಂಡಿತ್ತು.