ಕಳೆದ ಕೆಲವು ತಿಂಗಳಲ್ಲಿ ಚಿಕ್ಕಣ್ಣ ಅಭಿನಯದ ಒಂದರಹಿಂದೊಂದು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. “ಸಂಹಾರ’ ಮತ್ತು “ರ್‍ಯಾಂಬೋ 2′ ಬಿಡುಗಡೆಯ ನಂತರ, “ಅಮ್ಮ ಐ ಲವ್ ಯೂ’ ಬಂದು. ಕಳೆದ ವಾರ “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಬಿಡುಗಡೆಯಾಯಿತು. ಈ ವಾರ “ಡಬ್ಬಲ್ ಇಂಜಿನ್’ ಬರುತ್ತಿದೆ. ಮುಂದಿನ ದಿನಗಳಲ್ಲಿ ಚಿಕ್ಕಣ್ಣ ಅಭಿನಯದ ಇನ್ನಷ್ಟು ಚಿತ್ರಗಳು ಬರಲಿವೆ.
ಅಲ್ಲಿಗೆ ಈ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದ ಪೋಷಕ ಕಲಾವಿದರ ಸಾಲಿನಲ್ಲಿ ಚಿಕ್ಕಣ್ಣ ಸಹ ನಿಲ್ಲುತ್ತಾರೆ. ಈ ಮಧ್ಯೆ ಚಿಕ್ಕಣ್ಣ ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ. ಪುನೀತ್ ರಾಜಕುಮಾರ್ ಅಭಿನಯದ “ನಟಸಾರ್ವಭೌಮ’, ಅಭಿಷೇಕ್ ಅಂಬರೀಶ್ ಅಭಿನಯದ “ಅಮರ್’, ಚಿರಂಜೀವಿ ಸರ್ಜಾ ಅಭಿನಯದ “ರಾಜ ಮಾರ್ತಾಂಡ’,
ಶ್ರೇಯಸ್ ಅಭಿನಯದ “ಪಡ್ಡೆಹುಲಿ’, ಮಂಜು ಮಾಂಡವ್ಯ ಅಭಿನಯ ಮತ್ತು ನಿರ್ದೇಶನದ “ಭರತ ಬಾಹುಬಲಿ’, ಹೊಸಬರ “ಹೌಸ್ ಫಾರ್ ಸೇಲ್’ ಹೀಗೆ ಏಳೆಂಟು ಚಿತ್ರಗಳನ್ನು ಚಿಕ್ಕಣ್ಣ ಒಪ್ಪಿಕೊಂಡಿದ್ದು, ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಎಲ್ಲಾ ಸರಿ, ಚಿಕ್ಕಣ್ಣ ಹೀರೋ ಆಗೋದು ಯಾವಾಗ ಎಂಬ ಪ್ರಶ್ನೆ ಬರಬಹುದು. “ಈಗ ಚೆನ್ನಾಗಿದ್ದೀನಿ. ಅವೆಲ್ಲಾ ಬೇಕಾ?’ ಎಂಬ ಪ್ರಶ್ನೆಯು ಉತ್ತರ ರೂಪದಲ್ಲಿ ಬರುತ್ತದೆ. “ಹಾಗೆ ನೋಡಿದರೆ, “ರಾಜಾಹುಲಿ’ ಚಿತ್ರ ಬಿಡುಗಡೆಯಾದ ಮೇಲೆಯೇ ನನಗೆ ಹೀರೋ ಆಗುವ ಅವಕಾಶ ಬಂದಿತ್ತು. ಹೀರೋ ಆಗೋದು ದೊಡ್ಡ ಜವಾಬ್ದಾರಿಯ ವಿಚಾರ.
ಗೆದ್ದರೆ ಓಕೆ. ಗೆಲ್ಲದಿದ್ದರೆ ಜನ ಆಮೇಲೆ ಬೇರೆ ಚಿತ್ರಗಳಿಗೆ ಕರೆಯುವುದಕ್ಕೂ ಹಿಂಜರಿಯುತ್ತಾರೆ. ಹಾಗಾಗಿ ಸದ್ಯಕ್ಕೆ ಬೇರೆ ಯೋಚನೆ ಬಿಟ್ಟು, ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೀನಿ. ನಾನ್ಯಾವತ್ತೂ ನಟನಾಗಿ ಬಿಝಿಯಾಗಿರುತ್ತೀನಿ ಅಂತ ಅಂದುಕೊಂಡವನಲ್ಲ. ಹಾಗಾಗಿ ಮುಂದೆ ಏನಿದೆಯೋ ಗೊತ್ತಿಲ್ಲ’ ಎನ್ನುತ್ತಾರೆ ಚಿಕ್ಕಣ್ಣ.