Advertisement

ಭಾಷಾ ಉಳಿವಿನ ಚಿಂತನೆ ಅಗತ್ಯ

05:08 PM Jan 31, 2021 | Team Udayavani |

ತರೀಕೆರೆ: ಕನ್ನಡ ಭಾಷೆಯಲ್ಲಿ ಸಂಸ್ಕೃತಿ ಹಾಸು ಹೊಕ್ಕಿದೆ. ಭಾಷೆ ಎಂದರೆ ಅದೊಂದು ಜೀವನ. ಜೀವನ ಶೈಲಿ ಭಾಷೆಯಲ್ಲಿ ಅಡಗಿದೆ. ಗ್ರಾಮೀಣ ಪ್ರದೇಶಗಳಿಂದಾಗಿ ಇಂದಿಗೂ ಕೂಡ ಸಂಸ್ಕೃತಿ, ಭಾಷೆ ಉಳಿದಿದೆ. ಆಧುನಿಕ ಜಗತ್ತಿನಲ್ಲಿ ಕನ್ನಡ ಭಾಷೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ನಾವು ಚಿಂತಿಸಬೇಕಾಗಿದೆ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅದ್ಯಕ್ಷ ಮತ್ತು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದ ಸ್ನೇಹ ಬಂಧು ಎಚ್‌. ಚಂದ್ರಪ್ಪ ವೇದಿಕೆಯಲ್ಲಿ ನಡೆದ 17ನೇ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ತಂತ್ರಜ್ಞಾನ, ವಿಜ್ಞಾನ ಬೆಳದಂತೆ ನಾವು ನಮ್ಮ ಭಾಷೆಯಿಂದ ದೂರವಾಗುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ಓದುವಂತಾಗಿದೆ. ಇದರಿಂದ ಕನ್ನಡ ಭಾಷೆಯ ಬರವಣಿಗೆ ಕಡಿಮೆಯಾಗುತ್ತಿದೆ. ಸದಾ ಕಾಲ ಮೊಬೈಲ್‌ನಲ್ಲಿ ಮುಳುಗಿರುವ ಇಂದಿನ ಯುವ ಜನಾಂಗಕ್ಕೆ ಕನ್ನಡ ಭಾಷೆ ಬರೆಯುವುದು ಮರೆತು ಹೋಗಿದೆ. ಓದುವುದು ಬರೆಯುವುದು ನಿಂತು ಹೋಗಿದೆ. ಭಾಷೆ ಬೆಳವಣಿಗೆಗೆ ನಿರಂತರ
ಓದು ಬರಹ ಮುಖ್ಯವಾದುದು.

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳನ್ನು ಓದುವುದು ಕೂಡ ಕಡಿಮೆಯಾಗಿದೆ. ಆದರೆ ಕನ್ನಡ ಭಾಷೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು
ಪತ್ರಿಕೆಗಳು ಎಂದರು.

ಸಮ್ಮೇಳಾನಾಧ್ಯಕ್ಷ ಎನ್‌. ರಾಜು ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ, ಖಾಸಗಿ ಶಾಲೆಗಳು ಹಣ ಮಾಡುವ ಸಂಸ್ಥೆಗಳಾಗಿ ಬೆಳೆಯುತ್ತಿವೆ. ಜೊತೆಗೆ ಮಾತೃಭಾಷೆಗೆ ಆದ್ಯತೆ ನೀಡದೆ ಮಕ್ಕಳನ್ನು ಇಂಗ್ಲಿಷ್‌ ಗುಲಾಮರನ್ನಾಗಿ ಮಾಡುತ್ತಿವೆ. ಇದಕ್ಕೆ ಲಂಗು- ಲಗಾಮು ಇಲ್ಲದಂತಾಗಿದೆ. ಈ ವಿಚಾರಗಳಲ್ಲಿ ಕನ್ನಡಿಗರು, ಪರಿಷತ್‌ ಉಗ್ರ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ. ಶಾಲಾ ಕಲಿಕೆಗೆ ಕಾನ್ವೆಂಟ್‌ ಸಂಸ್ಕೃತಿಗೆ ಮಾರು ಹೋಗಿರುವುದರಿಂದ ಭಾಷೆಗೆ ಕುತ್ತು ಬಂದಿದೆ ಎಂದರು.

ಶಾಸಕ ಮತ್ತು ಡಿಸಿಸಿ ಬ್ಯಾಂಕ್‌ ಅದ್ಯಕ್ಷ ಡಿ.ಎಸ್‌. ಸುರೇಶ್‌ಮಾತನಾಡಿ, ನಮ್ಮ ನೆಲದಲ್ಲಿ ಭಾಷೆ, ನೆಲ , ಜಲ ಗಡಿಭಾಗದಲ್ಲಿನ ಘರ್ಷಣೆಯ ನಡುವೆ ಹೋರಾಡುವ ಸ್ಥಿತಿಯನ್ನು ತಲುಪಿದ್ದೇವೆ. ಕೇವಲ ವೇದಿಕೆಯಲ್ಲಿ ನಿಂತು ಮಾತನಾಡುವುದಕ್ಕಿಂತ ನುಡಿದ್ದನ್ನು  ನಡೆಯುವಂತೆ ನಾವು ಮಾಡಬೇಕಾಗಿದೆ.  ಭಾಷೆ ಉಳಿಯುವುದಕ್ಕೆ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಾಹಿತ್ಯ ಪರಿಷತ್‌ ಅದ್ಯಕ್ಷ ಕುಂದೂರು ಅಶೋಕ್‌, ಕನ್ನಡ ಕಟ್ಟುವ ಕೆಲಸಕ್ಕೆ ನಾವು ವಿದೇಶಿಯರನ್ನು ಅನುಸರಿಸಬೇಕಾಗಿದೆ.
ಕಿಟ್ಟಲ್‌ ಕನ್ನಡ ನಿಘಂಟು ನೀಡಿದವರು. ಆದರೆ ಇಂದು ಕನ್ನಡ ಭಾಷೆಗೆ ಉಸಿರುಗಟ್ಟುವ ವಾತಾವರಣವಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಜೀವ ಚೈತನ್ಯವನ್ನು ನೀಡುತ್ತಿವೆ ಎಂದರು.

Advertisement

ಹಿಂದೆ ಮನೆಗಳಲ್ಲಿ ಹಿರಿಯರು ಮಕ್ಕಳಿಗೆ ಕತೆಗಳನ್ನು ಹೇಳುತ್ತಿದ್ದರು. ಇದರಿಂದಾಗಿ ಭಾಷೆ ಬೆಳೆಯುತ್ತಿತ್ತು. ಆದರೆ ಮನೆಗಳಲ್ಲಿ ಹಿರಿಯರು ಇಲ್ಲದಂತಾಗಿದ್ದಾರೆ. ಅವರು ವೃದ್ಧಾಶ್ರಮ ಸೇರಿದ್ದಾರೆ. ಕತೆ ಕೇಳುತ್ತಿದ್ದ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಕಳೆದು ಹೋಗಿದ್ದಾರೆ ಮತ್ತು
ವ್ಯಾಸಂಗಕ್ಕಾಗಿ ಬೇರೆಡೆ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಕತೆಗೆ ಮತ್ತು ಸಾಹಿತ್ಯಕ್ಕೆ ಪರಿವರ್ತನೆ ಮಾಡುವ ಶಕ್ತಿ ಇದೆ ಎನ್ನುವುದನ್ನು ನಾವು ಮರೆಯಬಾರದು ಎಂದರು.

ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿಯನ್ನು ಕಸಾಪ ಮಾಜಿ ಕೋಶಾದ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಬಿಡುಗಡೆ ಮಾಡಿದರು, ಸಭೆಯನ್ನು ಉದ್ದೇಶಿಸಿ ಪತ್ರಕರ್ತ ಕಂಕಮೂರ್ತಿ, ಸಾಹಿತಿ ಕೆ.ಎಂ. ರೇವಣ್ಣ ಮಾತನಾಡಿದರು. ಲೇಖಕ ಕೆ.ಎಂ. ರೇವಣ್ಣ ಅವರ ಶರಣ ನುಲಿಯ ಚಂದಯ್ಯ ಜೀವನ ಚರಿತ್ರೆ ಮತ್ತು ಲಕ್ಕವಳ್ಳಿಯ ಸಿ.ಚಕ್ರವರ್ತಿ ನಿನಗೆ ಹೇಳಿದ ಮಾತುಗಳು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ನಿಕಟಪೂರ್ವ ಅದ್ಯಕ್ಷ ಬಿ.ಎಸ್‌. ಭಗವಾನ್‌ ಪೀಠ ಹಸ್ತಾಂತರವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಅಜ್ಜಂಪುರ ಸಾಹಿತ್ಯ ಪರಿಷತ್‌ ಅದ್ಯಕ್ಷ ಡಿ.ಪಿ. ರಾಜಪ್ಪ, ಡಿಸಿಸಿ ಬ್ಯಾಂಕ್‌ ಉಪಾದ್ಯಕ್ಷ ಟಿ.ಎಲ್‌. ರಮೇಶ್‌, ಶೊಂಬೈನೂರು ಆನಂದಪ್ಪ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಲಕ್ಷ್ಮೀ ಕಾಂತ್‌, ಜಿಪಂ ಸದಸ್ಯ ಮಹೇಶ್‌ ಒಡೆಯರ್‌, ಡಿವೈಎಸ್‌ಪಿ ಏಗನಗೌಡರ್‌, ತಹಶೀಲ್ದಾರ್‌ ಗೀತಾ ಸಿ.ಜಿ. ಇದ್ದರು.

ಓದಿ : ಮಹದಾಯಿ ಬೇಡಿಕೆಯೊಂದಿಗೆ ಬೆಂಗಳೂರು ಚಲೋ

Advertisement

Udayavani is now on Telegram. Click here to join our channel and stay updated with the latest news.

Next