Advertisement

ಜಿಲ್ಲಾದ್ಯಂತ ಯೋಗ ದಿನಾಚರಣೆ ಸಂಭ್ರಮ

11:25 AM Jun 22, 2019 | Naveen |

ಚಿಕ್ಕಮಗಳೂರು: ಜಿಲ್ಲಾದ್ಯಂತ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Advertisement

ಜಿಲ್ಲಾ ಕೇಂದ್ರದ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆಯುಷ್‌ ಇಲಾಖೆ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಯೋಗಸ್ಥಿತಿಯಲ್ಲಿ ಸಾವಿರಾರು ಯೋಗಾಭ್ಯಾಸಿಗಳು ಕಾಡಾಸನ, ವೃಶ್ಚಿಕಾಸನ, ಪಾದ ಹಸ್ತಾಸನ, ಚಕ್ರಾಸನದ ಮೂಲಕ ನಿಂತು ದೇಹ ದಂಡಿಸಿದರೆ, ನಂತರ ಕುಳಿತು ಭದ್ರಾಸನ, ವಕ್ರಾಸನಗಳನ್ನು ಮಾಡಿದರು. ಪ್ರತಿ ಆಸನದ ಬಗ್ಗೆ ಸೂಕ್ತ ವಿವರಣೆ ನೀಡಿದ ಪ್ರಭೋದಿನಿ ಯೋಗ ಸಂಸ್ಥೆ ಮುಖ್ಯಸ್ಥ ಶಿವಪ್ಪ, ಆ ಆಸನಗಳು ನೀಡುವ ಉಪಶಮನಗಳ ಬಗ್ಗೆ ಮಾಹಿತಿ ನೀಡಿದರು.

ಮಲಗಿಕೊಂಡು ಮಾಡುವ ಮಕ್ರಾಸನ, ಭುಜಂಗಾಸನ, ಶಲಭಾಸನಗಳ ನಂತರ ಅಂಗಾತನಾಗಿ ಮಲಗಿ ಮಾಡುವ ಸೇತುಬಂಧಾಸನ, ಉತ್ತಾನಪಾದಾಸನ, ಪವನಮುಕ್ತಾಸನ ಪ್ರದರ್ಶಿಸಿ ಕೊನೆಗೆ ಶವಾಸನದ ಸ್ಥಿತಿಯಲ್ಲಿ ವಿಶ್ರಮಿಸಿಕೊಳ್ಳಲು ಹೇಳಲಾಯಿತು.

ಆಸನಗಳು ಮುಗಿದ ನಂತರ ಯೋಗಾಚಾರ್ಯ ದಿವಾಕರ ಭಟ್ಟರಿಂದ ಕಪಾಲಬಾತಿ, ಅದರ ಉದ್ದೇಶ, ದೇಹಕ್ಕಾಗುವ ಲಾಭಗಳ ವಿವರಣೆಯೊಂದಿಗೆ ಸಾಮೂಹಿಕ ಅಭ್ಯಾಸ ನಡೆಯಿತು. ಉಸಿರಾಟದ ನಿಯಂತ್ರಣ ಮತ್ತು ಅನುಕೂಲಗಳ ಬಗ್ಗೆ ಅರ್ಥವತ್ತಾದ ವಿವರಣೆ ನೀಡಿದರು. ಅಂತ್ಯದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯಿಂದ ರಾಜಯೋಗ ಹಾಗೂ ಧ್ಯಾನದ ಉಪಯುಕ್ತತೆ ಕುರಿತು ಮಾಹಿತಿ ನೀಡಿದರು.

Advertisement

ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಜೊತೆ ಭಾರತ್‌ ಸ್ವಾಭಿಮಾನ ಪತಂಜಲಿ ಯೋಗ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್‌, ಪ್ರಭೋನಿ ಯೋಗ ಶಿಕ್ಷಣ ಟ್ರಸ್ಟ್‌, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಸಮರ್ಪಣಾ ಟ್ರಸ್ಟ್‌ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ನಿಸರ್ಗ ಚಿಕಿತ್ಸಾ ಕೇಂದ್ರಗಳು ಕೈಜೋಡಿಸಿದ್ದವು.

ಕೆಲವು ಮುಸ್ಲಿಮರೂ ಸಹ ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು.

ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಪಲ್ಲವಿ ಸಿ.ಟಿ.ರವಿ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ಅಪರ ಜಿಲ್ಲಾ ರಕ್ಷಣಾಧಿಕಾರಿ ಶೃತಿ, ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ಡಿಎಚ್ಒ ಡಾ.ಅಶ್ವತ್ಥಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಇತರರು ಯೋಗಾಸನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next