ಚಿಕ್ಕಮಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆಗಳಲ್ಲಿ ವಿಶೇಷ ಸಿಹಿ ಖಾದ್ಯಗಳನ್ನು ಸಿದ್ಧಪಡಿಸಿ ಆಯ್ದ ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ.
ನಗರದ ಮಲ್ಲಂದೂರು ರಸ್ತೆ, ಉಪ್ಪಳ್ಳಿ, ಶರೀಫ್‌ಗಲ್ಲಿಯ ಮದೀನ ಮಸೀದಿ ಸಮೀಪ ಈ ಸಿಹಿ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಅಲ್ಲೆ ಇವುಗಳನ್ನು ಸೇವಿಸುತ್ತಾರೆ. ಕುಟುಂಬ ಸಮೇತರಾಗಿ ಸವಿಯಲು ಹೆಚ್ಚಿನ ಜನರು ಪಾರ್ಸಲ್ ಮೂಲಕ ಮನೆಗೆ ಕೊಂಡೊಯ್ಯುತ್ತಾರೆ.
ರಂಜಾನ್ ಮುಗಿಯುವವರೆಗೂ ಈ ಸಿಹಿ ಖಾದ್ಯಗಳಲ್ಲದೆ ಕಲ್ಲಂಗಡಿ, ಪಪ್ಪಾಯಿ ಸೇರಿದಂತೆ ಬಗೆ ಬಗೆಯ ಹಣ್ಣುಗಳ ಮಾರಾಟ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಡೆಯುತ್ತದೆ. ವಿಶೇಷವಾಗಿ ಕಾಶ್ಮೀರಿಕಲಿ, ಬಾಂಬೆ ಬೊಂಡಾ, ಖಾಜಾಪೂರಿ, ಕಜೂರ, ಸಮೋಸ, ಬಾದಷ ಸೇರಿದಂತೆ ಆರು ಬಗೆಯ ತಿಂಡಿಗಳಾದ ಉದ್ದಿನ ವಡೆ, ಈರುಳ್ಳಿ ಬಜ್ಜಿ, ಆಲೂಗಡ್ಡೆ ಬಜ್ಜಿ, ಹೀರೇಕಾಯಿ ಮತ್ತು ಬಾಳೇಕಾಯಿ ಬಜ್ಜಿಗಳು ಬಾಯಲ್ಲಿ ನೀರೂರುವಂತೆ ಮಾಡಿ ಖರೀದಿಸಿ ಬಾಯಿ ಚಪ್ಪರಿಸುವಂತೆ ಉತ್ತೇಜಿಸುತ್ತವೆ.
ಸಂಜೆ ವೇಳೆ ಪ್ರಾರ್ಥನೆ ಸಲ್ಲಿಸಲು ಬರುವವರು ಈ ಸಿಹಿ ಖಾದ್ಯಗಳು ಸೇರಿದಂತೆ ಹಣ್ಣುಗಳನ್ನು ತರುತ್ತಾರೆ. ಪ್ರಾರ್ಥನೆ ಮುಗಿದ ಬಳಿಕ ಇವುಗಳನ್ನು ಹಂಚಿಕೊಂಡು ಸೇವಿಸಿ ನಂತರ ಮನೆಗೆ ತೆರಳುತ್ತಾರೆ. ನಗರದಲ್ಲಿ ಕಳೆದ 25 ವರ್ಷಗಳಿಂದ ರಂಜಾನ್ ವೇಳೆ ಈ ಸಿಹಿ ಖಾದ್ಯಗಳನ್ನು ತಯಾರಿಸಿ, ಮಾರಾಟ ಮಾಡುವ ಇರ್ಷಾದ್ ಅಹಮದ್(ಬಾಂಬೆ) ಅವರನ್ನು ಮಾತಿಗೆಳೆದಾಗ, ನಮ್ಮಲ್ಲಿ ವಿಶೇಷವಾಗಿ ಕಾಶ್ಮೀರಿಕಲಿ, ಬಾಂಬೆ ಬೋಂಡಾ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಖಾದ್ಯಗಳ ತಯಾರಿಸಲು ಬೇಕಾದ ಪದಾರ್ಥಗಳ ಬೆಲೆ ಏರಿಕೆಯಾಗಿದ್ದರೂ ಈ ಸಿಹಿ ತಿಂಡಿಗಳ ದರವನ್ನು ಮಾತ್ರ ಹೆಚ್ಚಿಸಿಲ್ಲ ಎಂದರು.
ಖಾಜಾಪೂರಿ, ಕಜೂರ, ಸಮೋಸ, ಬಾದಷವನ್ನು ಪ್ರತಿಯೊಂದಕ್ಕೆ 10 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬಗೆಬಗೆಯ ಬಜ್ಜಿ, ಪಕೋಡವನ್ನು 1ಕ್ಕೆ 5ರೂ. ಗಳಂತೆ ಮಾರಲಾಗುತ್ತದೆ. ಬೆಳಗ್ಗೆ 10ಗಂಟೆಗೆ ಆರಂಭವಾಗುವ ಕೆಲಸ ರಾತ್ರಿ 10ಗಂಟೆಯವರೆಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ 13 ಮಂದಿ ಕೆಲಸಗಾರರು ವಿವಿಧ ಖಾದ್ಯಗಳನ್ನು ತಯಾರಿಸಿದ್ದರು. ಸ್ವಲ್ಪ ನಷ್ಟ ಉಂಟಾಗಿದ್ದರಿಂದ ಈ ವರ್ಷ 8 ಜನ ಕೆಲಸಗಾರರು ಇವುಗಳನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿದರು.
ಜನರಿಗೆ ಕೆಲಸವಿಲ್ಲ ದುಡ್ಡು ಕೈಯಲ್ಲಿ ಓಡಾಡುತ್ತಿಲ್ಲ. ಹಾಗಾಗಿ ಈ ಸಿಹಿ ಖಾದ್ಯಗಳು ಮತ್ತು ತಿನಿಸುಗಳು ಹೆಚ್ಚಾಗಿ ಮಾರಾಟವಾಗುತ್ತಿಲ್ಲ. ಕಳೆದ ವರ್ಷ ಹೆಚ್ಚೇನೂ ವ್ಯಾಪಾರವಾಗದೇ ನಷ್ಟ ಅನುಭವಿಸುವಂತಾಗಿತ್ತು. ಈ ವರ್ಷವೂ ಅಲ್ಪ ಸ್ವಲ್ಪ ವ್ಯಾಪಾರ ನಡೆಯುತ್ತಿದೆ ಎಂದು ತಿಳಿಸಿ, ಸಿಹಿ ಖಾದ್ಯ ಕರೆಯುವ ಎಣ್ಣೆ, ಮೈದಾ, ಸಕ್ಕರೆ, ಕಡಲೆಹಿಟ್ಟು, ಕಡಲೆಬೇಳೆ ದರಗಳು ಅಧಿಕವಾಗಿವೆ. ಆದರೂ ಈ ಖಾದ್ಯಗಳ ದರ ಮಾತ್ರ ಹೆಚ್ಚಾಗಿಲ್ಲ ಎಂದು ಹೇಳಿದರು.
ನಾಲ್ಕು ವರ್ಷಗಳಿಂದ ಈ ಸಿಹಿ ಖಾದ್ಯಗಳನ್ನು ಉಪ್ಪಳ್ಳಿ ವೃತ್ತದಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ಸಿ.ಎಸ್. ಇಬ್ರಾಹಿಂ ಈ ವರ್ಷ ಮಲ್ಲಂದೂರು ರಸ್ತೆಯ ಹೆಚ್.ಕೆ. ರಂಜಾನ್ ಸ್ಪೆಷಲ್ ನಾಮಫಲಕ ಹಾಕಿಕೊಂಡು ಈ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಖಾಜಾಪೂರಿ, ಖಜೂರ ತಯಾರಾಗಿದ್ದವು. ಸಮೋಸ ತಯಾರಿಸಲು ಬೇಕಾದ ವಸ್ತುಗಳನ್ನು ಹೊಂದಿಸಿಕೊಳ್ಳುತ್ತಿದ್ದರು.
ಮುಂದೆ ಸಾಗಿ ಬಂದರೆ ಆಟೋ ವೃತ್ತದ ಸಮೀಪ ಮುನ್ನ ಎಂಬುವವರು ಕಳೆದ ವರ್ಷದಿಂದ ಈ ಸಿಹಿ ಖಾದ್ಯಗಳ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ವ್ಯಾಪಾರ ಹೇಗಿತ್ತು ಎಂದು ಕೇಳಿದಾಗ ನಷ್ಟ ಉಂಟಾಗಿತ್ತು. ಈ ವರ್ಷ ಅಷ್ಟೇನೂ ವ್ಯಾಪಾರ ಜೋರಾಗಿ ನಡೆಯುತ್ತಿಲ್ಲವೆಂದು ಹೇಳಿದರು. ಪ್ರತಿ ವರ್ಷ ರಂಜಾನ್ ವೇಳೆ ಒಂದು ತಿಂಗಳು ಈ ಸಿಹಿ ಖಾದ್ಯಗಳ ಮಾರಾಟ ಜೋರಾಗಿಯೇ ನಡೆಯುತ್ತದೆ.