Advertisement

ಗ್ರಾಪಂಗಳಲ್ಲೇ ವಿವಾಹ ನೋಂದಣಿ ಮಾಡಿ

01:12 PM Nov 23, 2019 | Naveen |

ಚಿಕ್ಕಮಗಳೂರು: ವಿವಾಹ ನೋಂದಣಿ ಕಾರ್ಯವನ್ನು ಗ್ರಾಮ ಪಂಚಾಯತ್‌ಗಳಲ್ಲಿ ಮಾಡುವುದರಿಂದ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ಗಳಲ್ಲಿ ನಿರ್ಣಯ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌.ಕುಂದರ್‌ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ತೆಲಂಗಾಣ ರಾಜ್ಯಕ್ಕೆ ತೆರಳಿದ್ದಾಗ ಅಲ್ಲಿ ವಿವಾಹ ನೋಂದಣಿ ಕಾರ್ಯವನ್ನು ಗ್ರಾಮ ಪಂಚಾಯತ್‌ಗಳಲ್ಲಿಯೇ ಮಾಡುತ್ತಿರುವುದು ತಿಳಿಯಿತು. ಈ ರೀತಿ ಮಾಡಿದ ನಂತರ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗಿದೆ ಎಂಬ ಮಾಹಿತಿಯನ್ನು ಅಲ್ಲಿನ ಅಧಿಕಾರಿಗಳು ನೀಡಿದರು ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ಕಚೇರಿಯಲ್ಲಿಯೇ ವಿವಾಹ ನೋಂದಣಿ ಮಾಡಲು ಸರ್ಕಾರಿ ಆದೇಶದ ಅಗತ್ಯವಿಲ್ಲ. ಗ್ರಾಮ ಪಂಚಾಯತ್‌ಗಳಲ್ಲೇ ಈ ಕುರಿತು ನಿರ್ಣಯ ಕೈಗೊಳ್ಳಲು ಅವಕಾಶವಿದೆ. ಈ ಬಗ್ಗೆ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ತಿಳಿಸುವಂತೆ ಜಿ.ಪಂ. ಉಪಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಬಾಲ್ಯವಿವಾಹದಿಂದ ಆಗುವ ತೊಂದರೆಗಳ ಕುರಿತು ಸಾಕಷ್ಟು ಅರಿವು ಮೂಡಿಸಿದರೂ ಈಗಲೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ. ಈ ಜಿಲ್ಲೆಯಲ್ಲೂ ಪ್ರಸ್ತುತ ಸಾಲಿನಲ್ಲಿ 8 ಬಾಲ್ಯವಿವಾಹ ಪ್ರಕರಣಗಳು ನಡೆದಿವೆ. ಬಾಲ್ಯವಿವಾಹಗಳು ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರೇಶ್‌ ಮಾತನಾಡಿ, ಜಿಲ್ಲೆಯಲ್ಲಿ 2 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿವೆ. ನಗರದಲ್ಲಿ ನಡೆಯುತ್ತಿರುವ ವಸತಿ ನಿಲಯದಲ್ಲಿ 48 ಜನ ಉದ್ಯೋಗಸ್ಥ ಮಹಿಳೆಯರು ಹಾಗೂ 30 ವಿದ್ಯಾರ್ಥಿನಿಯರು ಇದ್ದಾರೆ. ಮೂಡಿಗೆರೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಅದು ಮುಕ್ತಾಯದ ಹಂತ ತಲುಪಿದೆ. ಕಟ್ಟಡ ನಿರ್ಮಾಣವಾದ ನಂತರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಈವರೆಗೂ 14,985 ಫಲಾನುಭವಿಗಳಿಗೆ 6.08 ಕೋಟಿ ರೂ.ಅನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ. ಜಿಲ್ಲೆಗೆ ಸಖೀ ಕೇಂದ್ರ ಮಂಜೂರಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಕಂತಿನಲ್ಲಿ 22.90 ಲಕ್ಷ ರೂ. ಬಿಡುಗಡೆಯಾಗಿತ್ತು. 2ನೇ ಕಂತಿನ ಅನುದಾನ ಬಿಡುಗಡೆಗೆ ಪ್ರಧಾನ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 31 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಎಲ್ಲರಿಗೂ ಪ್ರಕರಣಕ್ಕೆ ತಕ್ಕಂತೆ ಪರಿಹಾರದ ಹಣವನ್ನು ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 62 ಗುರಿಯನ್ನು ನೀಡಲಾಗಿದ್ದು, ಶೃಂಗೇರಿ, ಚಿಕ್ಕಮಗಳೂರು ಮತ್ತು ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸಾಲ ಮಂಜೂರಾತಿಗಾಗಿ ಬ್ಯಾಂಕ್‌ಗಳಿಗೆ ಅರ್ಜಿ ಕಳುಹಿಸಲಾಗಿದೆ ಎಂದು ನಿಗಮದ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ನಿಗಮದ ಯೋಜನೆಗಳಿಗೆ ಸರ್ಕಾರ ನಿಗದಿಪಡಿಸಿರುವ ಗುರಿಗಿಂತ ಹೆಚ್ಚು ಅರ್ಜಿಗಳು ಬರುತ್ತಿವೆ. ಪ್ರತಿ ವರ್ಷ ಗುರಿಗಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ಹೇಳಿದರು.

ಆಯೋಗದ ಸದಸ್ಯೆ ಶ್ಯಾಮಲಾ ಎಸ್‌.ಕುಂದರ್‌ ಮಾತನಾಡಿ, ನಗರದ ಹೆರಿಗೆ ಆಸ್ಪತ್ರೆಯ ಸಮೀಪದಲ್ಲಿ ಎ.ಎನ್‌.ಎಂ. ತರಬೇತಿ ಕೇಂದ್ರ ನಡೆಯುತ್ತಿದೆ. ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿ ಗುತ್ತಿಗೆ ಆಧಾರದ ಮೇಲೆ ಇಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದು, ಅವರಿಗೆ ಕೆಲವು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಜೊತೆಗೆ ತರಬೇತಿ ಕೇಂದ್ರದಲ್ಲಿ 28 ಜನ ತರಬೇತಿ ಪಡೆಯುತ್ತಿದ್ದಾರೆ. ಆದರೆ, ಅಲ್ಲಿ ಕಾವಲುಗಾರರನ್ನು ನೇಮಿಸಿಕೊಂಡಿಲ್ಲ.

ಸರ್ಕಾರದ ಕಾನೂನಿನಂತೆ ಯಾವುದೇ ಪ್ರದೇಶದಲ್ಲಿ 20 ಜನ ಮಹಿಳೆಯರು, ಯುವತಿಯರು ಇದ್ದಲ್ಲಿ ಅಲ್ಲಿಗೆ ಸೆಕ್ಯುರಿಟಿ ನೇಮಿಸಬೇಕು. ಈ ಬಗ್ಗೆ ತರಬೇತಿ ಕೇಂದ್ರದ ಪ್ರಾಂಶುಪಾಲರನ್ನು ಕೇಳಿದರೆ, ಅವರು ಸೆಕ್ಯುರಿಟಿ ಅವಶ್ಯಕತೆ ಇಲ್ಲವೆಂದು ಉಡಾಫೆ ಉತ್ತರ ನೀಡಿದ್ದಾರೆ.

ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿ.ಪಂ. ಉಪಕಾರ್ಯದರ್ಶಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಶೃತಿ, ಜಿ.ಪಂ. ಉಪ ಕಾರ್ಯದರ್ಶಿ ರಾಜಗೋಪಾಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next