Advertisement

ಅಲ್ಪ ಸಂಖ್ಯಾತರಿಗೆ ಸೌಲಭ್ಯ ಕಲ್ಪಿಸಿ

05:34 PM Jan 10, 2020 | Team Udayavani |

ಚಿಕ್ಕಮಗಳೂರು: ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರ ಮೀಸಲಿರಿಸಿರುವ ಅನುದಾನವನ್ನು ಅದೇ ಸಮುದಾಯದ ಅರ್ಹ ಫಲಾನುಭವಿಗಳಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅಡಿ ಜಿಲ್ಲೆಯಲ್ಲಿ ಒಟ್ಟು 8466 ಅರ್ಜಿ ಸಲ್ಲಿಕೆಯಾಗಿದ್ದು, 3397 ಫಲಾನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯವನ್ನು ಒದಗಿಸಲಾಗಿದೆ. ಉಳಿದ ಫಲಾನುಭವಿಗಳನ್ನು 2ನೇ ಹಂತದಲ್ಲಿ ಆಯ್ಕೆ ಮಾಡಿ ಜನವರಿ ಅಂತ್ಯದೊಳಗೆ ಸೌಲಭ್ಯ ಒದಗಿಸುವಂತೆ ಸೂಚಿಸಿದರು.

ಸಾಮಾಜಿಕ ಚಲನಶೀಲತೆ ಮತ್ತು ಸಾಂಸ್ಥಿಕ ಅಭಿವೃದ್ಧಿ ಕಾರ್ಯಕ್ರಮದಡಿ 32 ಸಂಘಗಳು ರಚನೆಯಾಗಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಪ್ರಗತಿಯಲ್ಲಿ ಕುಂಠಿತವಾಗಿದೆ. ಜನವರಿ 15 ರೊಳಗಾಗಿ ಲೀಡ್‌ ಬ್ಯಾಂಕ್‌ ಸಹಕಾರದೊಂದಿಗೆ ಸ್ವ-ಸಹಾಯ ಸಂಘ ಸಂಸ್ಥೆಗಳು ಪ್ರಗತಿಯಾಗಬೇಕು ಹಾಗೂ ಪಿ.ಎಂ.ಇ.ಜಿ.ಪಿ. ಮತ್ತು ಸಿ.ಎಂ.ಇ.ಜಿ.ಪಿ. ಕಾರ್ಯಕ್ರಮಗಳು ಪ್ರಗತಿಯಾಗಬೇಕು ಎಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧಿಕಾರಿಗೆ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ವತಿಯಿಂದ ಶಿಬಿರಗಳನ್ನು ಏರ್ಪಡಿಸಿ ಸ್ವಚ್ಛತೆಯ ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹೇಳಿದರು.

Advertisement

ಬಿಸಿಯೂಟ ಯೋಜನೆ, ಕ್ಷೀರ ಭಾಗ್ಯ, ಸೈಕಲ್‌ ಹಾಗೂ ಪಠ್ಯ ಪುಸ್ತಕಗಳ ವಿತರಣೆ ಶೇ.100 ಪ್ರಗತಿ ಸಾಧಿಸಿದೆ. ರಾಮನಹಳ್ಳಿ ಉರ್ದು ಶಾಲೆಗೆ ಮಂಜೂರಾಗಿದ್ದ ಹೆಚ್ಚುವರಿ ಕೊಠಡಿಯನ್ನು ಬಣಕಲ್‌ ಶಾಲೆಯಲ್ಲಿ 146 ಮಕ್ಕಳು ವ್ಯಾಸಂಗ ಮಾಡುತ್ತಿರುವ ಕಾರಣ ಅಲ್ಲಿಗೆ ಸ್ಥಳಾತರಿಸುವಂತೆ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವಾಜಪೇಯಿ ವಸತಿ ಯೋಜನೆಯಡಿ 73 ಅಲ್ಪಸಂಖ್ಯಾತ ಫಲಾನುಭವಿಗಳಲ್ಲಿ ಕಡೂರು 8, ಚಿಕ್ಕಮಗಳೂರು 15 ಎನ್‌.ಆರ್‌.ಪುರ 2, ಬೀರೂರು 5, ಮೂಡಿಗೆರೆ 2, ತರೀಕೆರೆ 8
ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆನ್‌ಲೈನ್‌ ಅರ್ಜಿ ಸಲ್ಲಿಕೆಯ ತಾಂತ್ರಿಕ ದೋಷದಿಂದ ಉಳಿದ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬವಾಗಿದ್ದು, ಶೀಘ್ರವಾಗಿ ಆಯ್ಕೆ ಪ್ರಕ್ರಿಯೆಯಾಗಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂಪಿತವಾಗಿರುವ ಶಾದಿ ಮಹಲ್‌, ಚರ್ಚ್ ಗಳ ಕಾಮಗಾರಿಗೆ ಮೀಸಲಿರಿಸಿರುವ ಅನುದಾನವನ್ನು ಶೀಘ್ರವಾಗಿ ಬಿಡುಗಡೆಗೊಳಿಸಿ ಕಾಮಗಾರಿಯನ್ನು
ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ನಾಮ ನಿರ್ದೇಶನ ಸದಸ್ಯ ಜೇಮ್ಸ್‌ ಡಿಸೋಜ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದುಮಣಿ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next