Advertisement

ಇಲಾಖೆಗಳ ಪ್ರಗತಿ ಶೂನ್ಯ: ಡಿಸಿ ಅಸಮಾಧಾನ

05:53 PM Jan 01, 2020 | Team Udayavani |

ಚಿಕ್ಕಮಗಳೂರು: ಗಿರಿಜನ ಉಪಯೋಜನೆಯಡಿ ಸರ್ಕಾರ ವಿವಿಧ ಇಲಾಖೆಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಪ್ರಗತಿ ಶೂನ್ಯವಾಗಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಿರಿಜನ ಉಪಯೋಜನೆಯಡಿ ವಿವಿಧ ಇಲಾಖೆಗಳಿಗೆ ಒದಗಿಸಿರುವ ಅನುದಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ಮತ್ತು ಸಾಮಾನ್ಯ ಜನರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಇಲಾಖೆಯ ಅಧಿಕಾರಿಗಳು ಎಡವಿರುವುದರಿಂದ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.

ಅಲ್ಲದೇ ಜನರಲ್ಲಿ ಅರಿವು ಉಂಟಾಗಿ ಸರ್ಕಾರದ ಯೋಜನೆಗಳ ಉಪಯೋಗ ಪಡೆಯಲು ಮುಂದಾದರೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿರುವುದು ಪ್ರಮುಖ ಕಾರಣ ಎಂದರು.

ಅಧಿಕಾರಿಗಳು ಜಿಲ್ಲೆಯಲ್ಲಿ ಸಂಚರಿಸಿ ಸ್ಥಳ ಪರಿಶೀಲನೆ ಮತ್ತು ಸಮೀಕ್ಷೆ ನಡೆಸಿ ಯಾವ ಭಾಗಕ್ಕೆ ಯಾವ ಯೋಜನೆಗಳು ಸೂಕ್ತ ಎಂಬುದನ್ನು ಮನಗಂಡು ಯೋಜನೆ ಅಳವಡಿಸಿಕೊಳ್ಳಲು ಮುಂದಾಗುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ತೋಟಗಾರಿಕಾ ಇಲಾಖೆಯವರು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಹಿಂದುಳಿದಿದ್ದು, ಮುಂದಿನ ಸಭೆಯೊಳಗೆ ಪ್ರಗತಿಯ ವರದಿ ನೀಡಬೇಕು ಎಂದು ತಿಳಿಸಿದರು. ಕೃಷಿ ಇಲಾಖೆಯು ಎಸ್‌.ಇ.ಪಿ.ಟಿ.ಎಸ್‌.ಪಿ ಯೋಜನೆಯಡಿ ಜಾರಿಯಾದ ಮತ್ತು ಜನಸಾಮಾನ್ಯರಿಗೆ ಅನುಕೂಲಕರವಾದ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದಂತೆ ಕಾಣುತ್ತಿದ್ದು, ಸರ್ಕಾರದಿಂದ ಬಿಡುಗಡೆಯಾದ ರೂ.106.68 ಲಕ್ಷ ಅನುದಾನದಲ್ಲಿ ಶೇ.56 ರಷ್ಟು ಅನುದಾನವನ್ನು ಮಾತ್ರ ಬಳಕೆ ಮಾಡಿರುವುದು ಪ್ರಗತಿಯ ಮಿತಿಯನ್ನು ಸೂಚಿಸುತ್ತಿದೆ ಎಂದರು.

Advertisement

ಬುಡಕಟ್ಟು ಉಪಹಂಚಿಕೆಯಡಿ ಮೀನುಗಾರಿಕಾ ಇಲಾಖೆಗೆ 1.25 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅನುದಾನ ಬಳಕೆಯಾಗಿಲ್ಲ. ಅಲ್ಲದೇ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಮುಖ್ಯಮಂತ್ರಿ ಸಡಕ್‌ ಯೋಜನೆ ಮತ್ತು ಜಿಲ್ಲಾ ಪಂಚಾಯತ್‌ ಅಭಿವೃದ್ಧಿ ಅನುದಾನದಲ್ಲಿ ಮಂಜೂರಾದ ಯೋಜನೆಗಳ ಕ್ರಿಯಾ ಯೋಜನೆಗಳನ್ನು ಅನುಮೋದನೆಗಾಗಿ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ನಂತರ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಬುಡಕಟ್ಟು ಉಪಹಂಚಿಕೆಯಡಿ ರೂ. 1 ಕೋಟಿ ವೆಚ್ಚದಲ್ಲಿ ಕೈಗೊಂಡ 6 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದು ಸಭೆಗೆ ತಿಳಿಸಿದರು. ಪ್ರಗತಿಯಲ್ಲಿ ಹಿಂದುಳಿದಿರುವ ಮತ್ತು ಪ್ರಗತಿ ಶೂನ್ಯವಾಗಿರುವ ಇಲಾಖೆಗಳು ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗಾಗಿ ಸರ್ಕಾರ ನೀಡಿರುವ ಎಲ್ಲಾ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್‌ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next