Advertisement

ಅಂಚೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

03:09 PM Dec 16, 2019 | Naveen |

ಚಿಕ್ಕಮಗಳೂರು: ಉಳಿತಾಯ ಯೋಜನೆ ಸೇರಿದಂತೆ ಅಂಚೆ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಸಾರ್ವಜನಿಕರು ಬಳಸಿಕೊಂಡಲ್ಲಿ ಅವು ಅವರ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತವೆ ಎಂದು ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಹೇಳಿದರು.

Advertisement

ನಗರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆದ ದಕ್ಷಿಣ ಕರ್ನಾಟಕ ವಲಯ ಮಟ್ಟದ ಅಂಚೆ ಅದಾಲತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಅಂಚೆ ಇಲಾಖೆಯೆಂದರೆ ಕೇವಲ ಪತ್ರಗಳನ್ನು ತಲುಪಿಸುವ ಇಲಾಖೆ ಎಂಬ ಕಲ್ಪನೆಯಿತ್ತು. ಅದನ್ನು ಬದಲಾಯಿಸಿರುವ ಅಂಚೆ ಇಲಾಖೆ ಇದೀಗ ಆರ್ಥಿಕ ಸೇವೆ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಜನರಿಗೆ ಒದಗಿಸುತ್ತಿದೆ ಎಂದರು.

ಅಂಚೆ ಇಲಾಖೆ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಿದೆ ಅದರ ಮೂಲಕ ಬ್ಯಾಂಕಿನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು. ಆಧಾರ್‌ ಸೇವೆ ಹಿಂದೆ ಜಿಲ್ಲಾ ಮಟ್ಟದಲ್ಲಿ ಮಾತ್ರ ದೊರೆಯುತ್ತಿತ್ತು. ಅಂಚೆ ಇಲಾಖೆ ಇದೀಗ ಆಧಾರ್‌ ತಿದ್ದುಪಡಿ ಮತ್ತು ನೋಂದಣಿ ಸೇವೆಯನ್ನು ಎಲ್ಲಾ ತಾಲೂಕುಗಳ ಅಂಚೆ ಕಚೇರಿಯಲ್ಲಿ ಒದಗಿಸುತ್ತಿದೆ ಎಂದು ಹೇಳಿದರು.

ಮೊಬೈಲ್‌ ಎಟಿಎಂ ಆರಂಭಿಸಿದೆ. ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಪಡೆಯುವವರಿಗೆ ಇಲಾಖೆಯ ಕಚೇರಿಗೆ ಬರಲಾಗದಿದ್ದಲ್ಲಿ ಅವರ ಮನೆ ಬಾಗಿಲಿಗೇ ತಲುಪಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಂಚೆ ಅಧೀಕ್ಷಕ ಜಿ.ಸಿ.ಶ್ರೀನಿವಾಸ್‌, ಸಾರ್ವಜನಿಕರ ದೂರು ಆಲಿಸುವುದು ಮತ್ತು ಅವರ ಸಲಹೆಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಜಿಲ್ಲೆಗಳಲ್ಲೂ ಅಂಚೆ ಅದಾಲತ್‌ ನಡೆಸುತ್ತಿದೆ ಎಂದು ತಿಳಿಸಿದರು.

Advertisement

ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಅದಾಲತ್‌ನಲ್ಲಿ ಗ್ರಾಹಕರ ದೂರುಗಳ ಪರಿಶೀಲನೆ ನಡೆಸುವುದರ ಜತೆಗೆ ಸಾರ್ವಜನಿಕರೊಂದಿಗೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಸಿದರು.

ರಾಜ್ಯದ ಅಂಚೆ ಕಚೇರಿಗಳಲ್ಲಿ ಕನ್ನಡದ ನಾಮಫಲಕಕ್ಕೆ ಮೊದಲ ಸ್ಥಾನ ನೀಡಬೇಕು. ನಂತರದ ಸ್ಥಾನವನ್ನು ಹಿಂದಿ ಮತ್ತು ಆಂಗ್ಲ ಭಾಷೆಗೆ ನೀಡಬೇಕು. ಅಂಚೆ ಕಚೇರಿಗಳಲ್ಲಿ ದೊರೆಯುವ ಸೇವೆಗಳ ವಿವರಗಳನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು ಎಂಬ ಸಲಹೆ ಇದೇ ವೇಳೆ ಕೇಳಿ ಬಂತು.

ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಸಹಾಯಕ ನಿರ್ದೇಶಕ ರಾಜಶೇಖರ್‌ ಭಟ್‌, ಸಹಾಯಕ ಅಧೀಕ್ಷಕ ಚಂದ್ರಶೇಖರ್‌, ಕಚೇರಿ ಸಹಾಯಕ ವಿಶ್ವೇಶ್ವರ ಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next