ಚಿಕ್ಕಮಗಳೂರು: ನೆರೆಯಿಂದ 216 ಮನೆಗಳಿಗೆ ಹಾನಿಯಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಒಟ್ಟು 87 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ. ಸಂಪೂರ್ಣ ವರದಿ ಬಂದ ನಂತರ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಅತಿವೃಷ್ಟಿ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕೆಲವು ಭಾಗಶಃ ಹಾಗೂ ಮತ್ತೆ ಕೆಲವು ಸಂಪೂರ್ಣ ಹಾನಿಯಾಗಿದೆ. ಶಿರವಾಸೆ ಗ್ರಾಪಂ ವ್ಯಾಪ್ತಿಯ ಹಡ್ಲುಗದ್ದೆ, ಹಿರೇಕೆರೆ ಹರಿಜನ ಕಾಲೋನಿ ಸ್ಥಳಾಂತರ ಮಾಡಬೇಕೆನ್ನುವ ಬೇಡಿಕೆ ಇದೆ. ಆಲ್ದೂರು, ಖಾಂಡ್ಯ, ಹುಯಿಗೆರೆ ಸೇರಿ ನಾಲ್ಕು ಟ್ರಾನ್ಸ್‌ಫಾರ್ಮರ್ ಹಾಗೂ ತಾಲೂಕಿನಲ್ಲಿ 212 ವಿದ್ಯುತ್ ಕಂಬಗಳು ಹಾನಿಯಾಗಿವೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ ಎಂದರು.
ಖಾಂಡ್ಯ ಬಳಿ ಬಾಳೆ ಗದ್ದೆಗೆ ನಿರ್ಮಾಣ ಮಾಡಿದ್ದ ಒಂದು ತೂಗು ಸೇತುವೆ ಹಾನಿಯಾಗಿದೆ. ನಲ್ಲೂರುಕೆರೆ, ಚಿಕ್ಕಕುರುಬರ ಹಳ್ಳಿ ನಾಲೆ, ಹುಲಿಗುಂದರಾಯನ ಕೆರೆ ದುರಸ್ತಿ, ಮತ್ತಾವರ ಹುಣಸೆಕಟ್ಟೆ, ಲಕ್ಷಿ ್ಮೕಪುರದ ಕೂಡ್ಲಿಕೆರೆ, ಚಂದಾಲಕಟ್ಟೆ, ಮುಗುಳವಳ್ಳಿ ಬೈರಾಪುರದ ಪಿಕಪ್, ದೊಡ್ಡಮಾಗರವಳ್ಳಿ ಕೆರೆ, ರಸ್ತೆ, ಸೇತುವೆ, ಗುಡ್ಡ ಕುಸಿತ, ಶಾಲಾ ಕಟ್ಟಡ, ತಡೆಗೋಡೆ, ಕಾಲು ಸೇತುವೆ, ಕಾಲುಸಂಕ ಸೇರಿ ಲೋಕೋಪಯೋಗಿ ಇಲಾಖೆಯಲ್ಲಿ 8.29 ಕೋಟಿ ರೂ. ಹಾನಿಯಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ 1.10ಕೋಟಿ ರೂ. ನಷ್ಟವಾಗಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ 26.95 ಕೋಟಿ ರೂ.ನಷ್ಟವಾಗಿದೆ ಎಂದು ವರದಿ ಬಂದಿದೆ. 36ಲಕ್ಷ ರೂ.ಕುಡಿಯುವ ನೀರಿನ ಪೈಪ್‌ಲೈನ್ ಹಾನಿ ಹಾಗೂ ಸಿಲ್r ತುಂಬಿರುವುದು, ಬೆಳೆಹಾನಿ ಸೇರಿ ಕೃಷಿ ಇಲಾಖೆಯಲ್ಲಿ 76 ಹೆಕ್ಟೇರ್, ಕಾಫಿ ಹೊರತುಪಡಿಸಿ ತೋಟಗಾರಿಕೆಯಿಂದ 74ಹೆಕ್ಟೇರ್, ಬಿಎಸ್‌ಎನ್‌ಎಲ್ನಲ್ಲಿ 13ಲಕ್ಷ ರೂ. ನಷ್ಟವಾಗಿದೆ. ಮೂರು ಜಾನುವಾರು ಮೃತಪಟ್ಟಿದ್ದು, ಕೆಲವು ಕಣ್ಮರೆಯಾಗಿವೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಹೇಳಿದರು.
ಗುಡ್ಡಕುಸಿತಗಳು ಮುಂದುವರೆಯುವ ಸಾಧ್ಯತೆ ಇರುವುದಲ್ಲದೆ, ಕೆಲವು ಕಡೆ ಭೂಮಿ ಬಿರುಕು ಬಿಟ್ಟಿದೆ ಎಂಬ ಮಾಹಿತಿ ನೀಡಿದ್ದಾರೆ. ಶಿರವಾಸೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗಿ ಬಂಡೆ ಉರುಳು ಬಿದ್ದಿದೆ. ಮತ್ತೆ ಅದು ಮುಂದುವರಿ ಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಗಣಿ ಮತ್ತು ಭೂ ಗರ್ಭ ಇಲಾಖೆ ತಾಂತ್ರಿಕ ಅಧಿಕಾರಿಗಳ ತಂಡದಿಂದ ಮಾಹಿತಿ ಪಡೆದು ಪರ್ಯಾಯ ಯೋಜನೆ ರೂಪಿಸುವಂತೆ ಸೂಚಿಸಿದರು.
ಕಾಫಿ ಭೋರ್ಡ್, ರಬ್ಬರ್ ಇತರೆ ತಂಡಗಳನ್ನು ಕಳುಹಿಸಿ ಕಾಫಿ, ಏಲಕ್ಕಿ, ಮೆಣಸು ಇತರೆ ವಾಣಿಜ್ಯ ಬೆಳೆಗಳ ನಷ್ಟದ ಅಂದಾಜು ಮಾಡಬೇಕಿದೆ. ಹಾಗಾಗಿ, ಜಿಲ್ಲಾಧಿಕಾರಿ ಮೂಲಕ ಸಂಬಂಧಪಟ್ಟ ಮಂಡಳಿಗಳನ್ನು ಕೋರಿಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಶೃಂಗೇರಿ, ಮೂಡಿಗೆರೆ ಕ್ಷೇತ್ರದ ಕೆಲವು ಗ್ರಾಮಗಳು ಸೇರಿದಂತೆ ಚಿಕ್ಕಮಗಳೂರು ತಾಲೂಕಿನಲ್ಲಿ ಒಟ್ಟು 87 ಕೋಟಿ ರೂ. ನಷ್ಟವಾಗಿರುವ ಬಗ್ಗೆ ಇಂದಿನ ದಿನದ ವರೆಗೂ ಮಾಹಿತಿ ಬಂದಿದೆ. ಸಮಗ್ರ ವರದಿ ಮತ್ತು ವೈಯಕ್ತಿಕ ಬೆಳೆ ನಷ್ಟದ ಅಂದಾಜು, ವಾಣಿಜ್ಯ ಬೆಳೆಗಳ ನಷ್ಟದ ಅಂದಾಜು ಮಾಡಬೇಕಾಗಿದೆ. ನಂತರ ಸಂಪೂರ್ಣ ಪಟ್ಟಿ ಮಾಡಲು ಸಾಧ್ಯವಾಗುತ್ತದೆ. ಎನ್‌ಡಿಆರ್‌ಎಫ್ ಗೈಡ್‌ಲೈನ್ ಪ್ರಕಾರ ಪರಿಹಾರ ಸಿಗುತ್ತದೆ ಎಂದರು.
ಮೂಡಿಗೆರೆ ತಾಲೂಕಿನಲ್ಲಿ ದೊಡ್ಡ ನಷ್ಟವಾಗಿದ್ದು, ವಾಣಿಜ್ಯ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗುತ್ತದೆ. ನಂತರ ಚಿಕ್ಕಮಗಳೂರು, ಶೃಂಗೇರಿ, ಎನ್.ಆರ್.ಪುರದಲ್ಲಿ ಹೆಚ್ಚು ನಷ್ಟವಾಗಿದೆ ಎಂದರು. ತಹಶೀಲ್ದಾರ್ ನಂದಕುಮಾರ್ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.