Advertisement

ಹೊರಗಡೆಯಿಂದ ಬರುವವರಿಗೆ ಕ್ವಾರಂಟೈನ್‌ ಕಡ್ದಾಯ

01:23 PM May 13, 2020 | Naveen |

ಚಿಕ್ಕಮಗಳೂರು: ಸೇವಾಸಿಂಧು ಆನ್‌ ಲೈನ್‌ ಮೂಲಕ ಅರ್ಜಿಸಲ್ಲಿಸಿ ಹೊರದೇಶ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವ ವ್ಯಕ್ತಿಗಳನ್ನು ತಪಾಸಣೆ ನಡೆಸಿ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

Advertisement

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌-19 ಗೆ ಸಂಬಂಧಿಸಿದಂತೆ ಹೊರದೇಶ ಹಾಗೂ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದವರನ್ನು ನಿಗಾವಹಿಸುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸೇವಾಸಿಂಧು ಮೂಲಕ ಅರ್ಜಿಸಲ್ಲಿಸಿ ಜಿಲ್ಲೆಯೊಳಗೆ ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ನಡೆಸಿ ಕಡ್ಡಾಯವಾಗಿ ಕ್ವಾರಂಟೈನ್‌ ನಲ್ಲಿರಿಸಲಾಗುವುದು. ಜಿಲ್ಲೆಯ ತೇಗೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಬೇಲೂರು ರಸ್ತೆಯಲ್ಲಿ 2 ಹೋಟೆಲ್‌ ನಿಗದಿಪಡಿಸಲಾಗಿದೆ ಎಂದರು.

ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರದಂತಹ ಹೆಚ್ಚು ಸೋಂಕಿನ ಪ್ರಕರಣಗಳಿರುವ ಪ್ರದೇಶದಿಂದ ಬಂದವರನ್ನು ತಪಾಸಣೆ ನಡೆಸಿ ಸೋಂಕಿನ ಲಕ್ಷಣಗಳಿದ್ದಲ್ಲಿ ಕೋವಿಡ್‌ ಸೆಂಟರ್‌ನಲ್ಲಿರಿಸಲಾಗುವುದು. ಜಿಲ್ಲೆಯ ಎಲ್ಲಾ ಗಡಿ ಭಾಗಗಳಲ್ಲಿ ಸೂಕ್ತಭದ್ರತೆ ಕಲ್ಪಿಸಿದ್ದು, ಹೊರಭಾಗಗಳಿಂದ ಬಂದ ವ್ಯಕ್ತಿಗಳನ್ನು ತಪಾಸಣೆ ಮಾಡಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡಬೇಕು ಎಂದು ಸೂಚಿಸಿದರು.

ಹೊರದೇಶಗಳಿಂದ ವಿದ್ಯಾರ್ಥಿಗಳು, ವೈದ್ಯರು ಸೇರಿದಂತೆ ವಿವಿಧ ವರ್ಗಗಳ ಜನರು ಬರುವಾಗ ಅವರಿಗೆ ಹೋಟೆಲ್‌ ವ್ಯವಸ್ಥೆ ಅಗತ್ಯವೆನಿಸಿದಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗುವುದು. ಆದರೆ, ಅದರ ಸಂಪೂರ್ಣ ವೆಚ್ಚವನ್ನು ಅವರೆ ಭರಿಸಬೇಕು ಸಾಧ್ಯವಾದಷ್ಟು ಮಂದಿಗೆ ಹಾಸ್ಟೆಲ್‌ ಕ್ವಾರಂಟೈನ್‌ ನಲ್ಲಿರಿಸಲು ಕ್ರಮವಹಿಸಲಾಗುವುದು ಎಂದರು. ಸಭೆಯಲ್ಲಿ ಜಿಪಂ ಸಿಇಒ ಎಸ್‌.ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ಉಪವಿಭಾಗಾಧಿಕಾರಿ ಡಾ| ಎಚ್‌.ಎಲ್‌.ನಾಗರಾಜ್‌, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next