ಶೃಂಗೇರಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.5 ಕ್ಕೆ ಇಳಿದರೆ ಮಾತ್ರ ಸಂಪೂರ್ಣ ಲಾಕ್‌ಡೌನ್ ತೆರವು ಮಾಡಬಹುದಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ತಾಪಂ ಸಭಾಂಗಣದಲ್ಲಿ ಮಂಗಳವಾರ ಕೋವಿಡ್ ನಿರ್ವಹಣೆ ಮತ್ತು ಪ್ರಕೃತಿ ವಿಕೋಪ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ಪ್ರತಿ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಪ್ರತಿ ದಿನವೂ ವರದಿ ಪಡೆಯುತ್ತಿದ್ದು, ಲಾಕ್‌ಡೌನ್ ತೆರವು ಮಾಡಲು ನಿದಿ ಷ್ಟ ಪಡಿಸಿದ ಪಾಸಿಟಿವಿಟಿ ಇರಬೇಕಿದೆ.
ಜಿಲ್ಲೆಯಲ್ಲಿ ಹಂತ- ಹಂತವಾಗಿ ಇಳಿಯುತ್ತಿರುವ ಪಾಸಿಟಿವಿಟಿ ದರದಿಂದ ಒಂದೆರಡು ದಿನದಲ್ಲಿ ಲಾಕ್‌ಡೌನ್ ತೆರವಾಗುವ ವಿಶ್ವಾಸವಿದೆ. ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಬೇಗಾರಿನ ಮೊರಾರ್ಜಿ ಶಾಲೆ ವಸತಿ ಗೃಹದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 71 ರೋಗಿಗಳು ಬೇಗಾರು ವಸತಿ ನಿಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆ ಜೋರಾಗಿದ್ದು, ತಜ್ಞರ ಅನಿಸಿಕೆಯಂತೆ ಮೂರನೇ ಅಲೆ ಮಕ್ಕಳ ಮೇಲಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಈಗಿನಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಏನೆಲ್ಲಾ ಕೊರತೆ ಇದೆ ಅದನ್ನು ಶೀಘ್ರದಲ್ಲಿ ಭರ್ತಿ ಮಾಡಿಕೊಳ್ಳಬೇಕು. ಲಸಿಕೆ ಅಭಿಯಾನವನ್ನು ಪ್ರಧಾನ ಮಂತ್ರಿಗಳ ಆದೇಶದಂತೆ ಈಗ ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಶಾಸಕ ಟಿ.ಡಿ. ರಾಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ತಹಶೀಲ್ದಾರ್ ಅಂಬುಜಾ, ತಾಪಂ ಕಾರ್ಯನಿರ್ವಹಣಾಧಿ ಕಾರಿ ಜಯರಾಂ ಇದ್ದರು. ಪಪಂ ಅಧ್ಯಕ್ಷ ಹರೀಶ್ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ. ಶಂಕರಪ್ಪ, ವೇಣುಗೋಪಾಲ್, ನೂತನಕುಮಾರ್, ತಲಗಾರು ಉಮೇಶ್ ಮತ್ತಿತರರು ಮಾತನಾಡಿದರು.