Advertisement

ನಿರಾಸೆ ತಂದ ಲಾಕ್‌ ಡೌನ್‌ವಿಸ್ತರಣೆ

01:35 PM Apr 15, 2020 | Naveen |

ಚಿಕ್ಕಮಗಳೂರು: ಲಾಕ್‌ಡೌನ್‌ನಿಂದ ಒಂದಿಷ್ಟು ರಿಯಾಯಿತಿ ದೊರಕಬಹುದೆಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನತೆಗೆ ಲಾಕ್‌ ಡೌನ್‌ ಅವಧಿ ಮೇ 3ರ ವರೆಗೂ ವಿಸ್ತರಣೆಯಾಗಿರುವುದು ಇನ್ನಿಲ್ಲದ ನಿರಾಸೆ ಮೂಡಿಸಿದೆ.

Advertisement

ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪಾಸಿಟಿವ್‌ ಪ್ರಕರಣ ಕಂಡುಬರದ ಹಿನ್ನೆಲೆಯಲ್ಲಿ ಜಿಲ್ಲೆ ಗ್ರೀನ್‌ ಝೋನ್‌ ವ್ಯಾಪ್ತಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಏ.14ರ ನಂತರ ಜಿಲ್ಲೆಯ ಜನ ಒಂದಿಷ್ಟು ರಿಯಾಯಿತಿ ದೊರೆಯುವ ನಿರೀಕ್ಷೆಯಲ್ಲಿದ್ದರು. ಜಿಲ್ಲೆಯ ಒಳಗಡೆ ಸಂಚಾರಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸೋಮವಾರ ಜನಸಂಚಾರ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿತ್ತು.

ಪ್ರಧಾನಿ ಮೋದಿ ಅವರು ಮೇ 3ರ ವರೆಗೂ ಲಾಕ್‌ಡೌನ್‌ ವಿಸ್ತರಣೆ ಮಾಡುತ್ತಿದ್ದಂತೆ ಜಿಲ್ಲಾದ್ಯಂತ ಪೊಲೀಸ್‌ ಇಲಾಖೆಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ನಿಯೋಜಿಸಿ ಇನಷ್ಟು ಬಿಗಿಗೊಳಿಸಿದ್ದಾರೆ. ಬೇರೆ ಜಿಲ್ಲೆಗಳಿಂದ ಜಿಲ್ಲೆಗೆ ಪ್ರವೇಶ ಮಾರ್ಗ ಮತ್ತು ನಗರದಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್ ಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಕಾರಣವಿಲ್ಲದೇ ತಿರುಗಾಡುವವರ ವಾಹನಗಳನ್ನು ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮದಿಂದ ಮಂಗಳವಾರ ನಗರದ ಜನಸಂಚಾರಕ್ಕೆ ಬ್ರೇಕ್‌ ಬಿದ್ದಿದೆ.

ಲಾಕ್‌ಡೌನ್‌ ವಿಸ್ತರಣೆಯಿಂದ ಕಳೆದ 21 ದಿನಗಳಿಂದ ಮನೆಯಲ್ಲೇ ಬಂದಿಯಾಗಿರುವ ಕಾರ್ಮಿಕರು, ವ್ಯಾಪಾರಸ್ಥರ ಮುಖದಲ್ಲಿ ನಿರಾಸೆ ಮೂಡಿಸಿದೆ. ಗ್ರಾಮೀಣ ಪ್ರದೇಶದ ಜನರಲ್ಲೂ ಲಾಕ್‌ಡೌನ್‌ ವಿಸ್ತರಣೆಯಿಂದ ಮಂಕು ಕವಿದಂತಾಗಿದೆ. ಕೆಲಸವಿಲ್ಲದೇ ಬದುಕು ನಡೆಸುವುದು ದುಸ್ತರವಾಗಲಿದೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಕಳೆದ ಮೂರು ದಿನಗಳಿಂದ ಜಮೀನಿನಲ್ಲಿ ಕೆಲಸ ನಿರ್ವಹಿಸುವ ರೈತರಿಗೆ ಪೊಲೀಸರು ನಿರ್ಬಂಧವನ್ನು ಸಡಿಲಿಸಿದ್ದು, ಹಸಿರು ಪಾಸ್‌ ಇಲ್ಲವೇ ಜಮೀನು ಪಹಣಿ ತೋರಿಸಿ ರೈತರು ನಿರ್ದಿಷ್ಟ ಅವ ಧಿಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಏ.14ರ ನಂತರ ಲಾಕ್‌ಡೌನ್‌ ಸಡಲಿಕೆಯಾಗುವ ನಿರೀಕ್ಷೆ ಇತ್ತು. ದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ವಿಸ್ತರಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪಾಸಿಟಿವ್‌ ಪ್ರಕರಣ ಕಂಡುಬರದ ಹಿನ್ನೆಲೆಯಲ್ಲಿ ಜನಜೀವನಕ್ಕೆ ಅನುಕೂಲವಾಗುವಂತೆ ಒಂದಿಷ್ಟು ನಿರ್ಬಂಧ ಸಡಲಿಕೆ ಮಾಡಿದ್ದರೆ ಜನತೆಗೆ ಅನುಕೂಲವಾಗುತ್ತಿತ್ತು.
ಸೋಮಶೇಖರ್‌,
ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next