ಚಿಕ್ಕಮಗಳೂರು: ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಕೋದಂಡ ರಾಮಚಂದ್ರಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ರಥದಲ್ಲಿ ಕೋದಂಡರಾಮಚಂದ್ರ ಸೇರಿದಂತೆ ಪರಿವಾರದ ಮೂರ್ತಿಯನ್ನು ಪ್ರತಿಷ್ಠಿಸಲಾಯಿತು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ದೊಡ್ಡ ದೊಡ್ಡ ಹೂವಿನಹಾರದಿಂದ ರಥವನ್ನು ಅಲಂಕರಿಸಲಾಗಿತ್ತು. ಕೊಂಬುಕಹಳೆಗಳು ಮೊಳಗುತ್ತಿದ್ದಂತೆ ಕೋದಂಡರಾಮಚಂದ್ರ ಪರ ಜಯಘೋಷಗಳು ಮೊಳಗಿಸಿದ ಭಕ್ತರು ರಥವನ್ನು ಎಳೆಯಲು ಪ್ರಾರಂಭಿಸಿದರು. ರಥ ಮುಂದೇ ಸಾಗುತ್ತಿದ್ದಂತೆ ಭಕ್ತರು ಗೋವಿಂದ, ಗೋವಿಂದ ಎನ್ನುತ್ತಿದ್ದರು. ರಸ್ತೆಬದಿ ನಿಂತಿದ್ದ ಭಕ್ತರು ಭಕ್ತಿಯಿಂದ ಕೈ ಮುಗಿಯುತ್ತಿದ್ದರು. ಮತ್ತೆ ಕೆಲ ಭಕ್ತರು ಬಾಳೆಹಣ್ಣನ್ನು ರಥದ ಕಳಸದ ಮೇಲೆ ಎಸೆದು ಭಕ್ತಿ ಅರ್ಪಿಸಿದರು.
ರಥೋತ್ಸವ ಅಂಗವಾಗಿ ಫೆ.29ರಂದು ಮಾ.3ರ ವರೆಗೆ ಮೂಲ ದೇವರಿಗೆ ಪಂಚಾಮೃತಾಭಿಷೇಕ, ಉದಯಸಿಂಹ ಮತ್ತು ವೃಂದದಿಂದ ಸಂಕೀರ್ತನೆ, ಆಂಡಾಳುಗೋಷ್ಠಿ, ಗೌರಿಶಕ್ತಿ ಮಹಿಳಾ ಮಂಡಳಿಯ ನಾಗಶ್ರೀ ತ್ಯಾಗರಾಜ್ ಅವರಿಂದ ಮತ್ತು ಬನಶಂಕರಿ ಮಹಿಳಾ ಮಂಡಳಿಯಿಂದ ಗೀತಾ ಪಾರಾಯಣ ಭಜನೆ, ಕಲ್ಯಾಣೋತ್ಸವ, ಸಹಸ್ರ ನಾಮಾರ್ಚನೆ, ನಾಗವಲ್ಲಿ ಪಲ್ಲಕ್ಕಿ ಉತ್ಸವ, ಶೇಷವಾಹನೋತ್ಸವ, ಗೀತಾ ಸತೀಶ್ ಮತ್ತು ತಂಡದವರಿಂದ ಸಂಗೀತ ಸೇವೆ, ಹನುಮಂತೋತ್ಸವ, ಗಜಾರೋಹಣೋತ್ಸವ ನಿರಂತರವಾಗಿ ನಡೆಸಲಾಗಿತ್ತು. ಮಾ.5 ರಂದು ಬೆಳಿಗ್ಗೆ 9.30 ಕ್ಕೆ ಶ್ರೀಕೃಷ್ಣ ಗಂಧೋತ್ಸವ, ತೋಮಾಲೆ ಸೇವೆ, ಮಂಟಪ ಸೇವೆ, ಆನಂತರ 12.15 ಕ್ಕೆ ಬ್ರಹ್ಮರಥೋತ್ಸವ ನಡೆಯಿತು.