ಚಿಕ್ಕಮಗಳೂರು: ದತ್ತಪೀಠ ವಿವಾದದ ಮುಕ್ತಿಗಾಗಿ ಅಯೋಧ್ಯೆ ಮಾದರಿಯಲ್ಲೇ ಹೋರಾಟ ನಡೆದಿದ್ದು, ಆದಷ್ಟು ಬೇಗ ತಾರ್ಕಿಕ ಅಂತ್ಯ ಕಾಣುವ ವಿಶ್ವಾಸವಿದೆ ಎಂದು ಭಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ್ ಹೇಳಿದರು.
ದತ್ತಪೀಠದ ಆವರಣದ ಹೊರಭಾಗದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದತ್ತಪೀಠಕ್ಕೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಮನವಿ ಮಾಡಿದರು.
ದತ್ತ ಪೀಠದ ಹೊರಭಾಗದಲ್ಲಿ ಈ ಹಿಂದೆ ಮಾಂಸಾಹಾರ ಸೇವನೆ ನಡೆಯುತ್ತಿತ್ತು. ಹೋರಾಟದ ಫಲವಾಗಿ ಅದಕ್ಕೆ ಈಗ ಕಡಿವಾಣ ಬಿದ್ದಂತಾಗಿದೆ ಎಂದರು. ದತ್ತಪೀಠದ ಮುಕ್ತಿ ಹೋರಾಟಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸಚಿವ ಸಿ.ಟಿ.ರವಿ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು ಮುಂದಾಗಿದ್ದರೆಂದು ತಿಳಿಸಿದರು.
ಶಂಕರದೇವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಆಶ್ರಯ ಕೇಳಿ ಬಂದವರಿಗೆ ಅವರ ಧರ್ಮಾಚರಣೆಗೂ ಅವಕಾಶ ಮಾಡಿಕೊಡುವ ಔದಾರ್ಯ ನಮ್ಮದು. ಆದರೂ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿಕೃತಿ ನಡೆಯುತ್ತಿದೆ ಎಂದು ಹೇಳಿದರು.
ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾಮಠದ ಶ್ರಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಭಜರಂಗದಳ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎ.ಶಿವಶಂಕರ್, ಕಾರ್ಯದರ್ಶಿ ಯೋಗೀಶ್ ರಾಜ್ ಅರಸ್ ಇದ್ದರು.