Advertisement

Chikkamagaluru: ದತ್ತ ಜಯಂತಿ ಶೋಭಾಯಾತ್ರೆ ಆರಂಭ

05:30 PM Dec 13, 2024 | Team Udayavani |

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಂಘಟನೆಗಳಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಜಯಂತಿ ಹಿನ್ನಲೆಯಲ್ಲಿ ಶುಕ್ರವಾರ (ಡಿ.13) ಶೋಭಾಯಾತ್ರೆ ನಡೆಸಲಾಯಿತು.

Advertisement

ನಗರದ ಕಾಮಧೇನು ಗಣಪತಿ ದೇವಳ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಾಜಿ ಸಚಿವ ಡಿ.ಎನ್.ಜೀವರಾಜ್, ವಿಎಚ್ ಪಿ ಮುಖಂಡ ರಘು‌ ಸಕಲೇಶಪುರ ಸಾಥ್ ನೀಡಿದರು.

ಕಾಮಧೇನು ಗಣಪತಿ ದೇವಳ ಆವರಣದಿಂದ ಆರಂಭವಾದ ಶೋಭಾಯಾತ್ರೆ ಕೆಇಬಿ ವೃತ್ತ, ಬಸವನಹಳ್ಳಿ ರಸ್ತೆಯಲ್ಲಿ ಹನುಮಂತಪ್ಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದ ಜನರು ಕುಣಿದು ಕುಪ್ಪಳಿಸಿದರು. ಜನರು ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು.

ಇಲ್ಲಿಂದ ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಅಂಡೇಛತ್ರ ದಾಟಿ ಆಜಾದ್ ಪಾರ್ಕ್ ವೃತ್ತ ತಲುಪಲಿದೆ. ಶೋಭಾಯಾತ್ರೆಯಲ್ಲಿ ಮಂಗಳವಾದ್ಯ, ಗೊಂಬೆ ಕುಣಿತ ಆಕರ್ಷಣೀಯವಾಗಿತ್ತು.

Advertisement

ಮೆರವಣಿಗೆ ಸಾಗುತ್ತಿದ್ದಂತೆ ವಾಹನದಲ್ಲಿ ಸಾಗಿ ಬಂದ ಡಿ.ಜೆ.ಸದ್ದಿಗೆ ಮಹಿಳೆಯರು, ವೃದ್ಧರಾದಿಯಾಗಿ ಪುಟಾಣಿ ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಶೋಭಾಯಾತ್ರೆ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಸ್ ಪಿ ಡಾ.ವಿಕ್ರಮ್ ಅಮಟೆ ಭದ್ರತೆ ನೇತೃತ್ವ ವಹಿಸಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಸಿಸಿ ಕ್ಯಾಮರ ಕಣ್ಗಾವಲಿನಲ್ಲಿ ಮೆರವಣಿಗೆ ಸಾಗಿತು.

Advertisement

Udayavani is now on Telegram. Click here to join our channel and stay updated with the latest news.

Next