ಚಿಕ್ಕಮಗಳೂರು: ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಜನರನ್ನು ಸ್ವಾಗತಿಸುವ ದಂಟರಮಕ್ಕಿ ಕೆರೆ ಹೂಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ಮಾತ್ರವಲ್ಲ, ಕೆರೆಯ ಮಧ್ಯ ಭಾಗದಲ್ಲಿ ನಿರ್ಮಿಸಿರುವ ಉದ್ಯಾನವನದಲ್ಲಿ ಸ್ಥಾಪಿಸಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪಗೊಂಡ ಕಾರಣ ಹಿಂದೆ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಅದೇ ಉದ್ಯಾನವನ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಈ ಹಿಂದೆ ದಂಟರಮಕ್ಕಿ ಕೆರೆಯ ಮಧ್ಯ ಭಾಗದಲ್ಲಿ ನಗರಸಭೆಯಿಂದ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ. ದ್ವೀಪದಂತಿರುವ ಏರಿಯ ಮೇಲೆ ಬಿದಿರು ಸೇರಿದಂತೆ ಅನೇಕ ಗಿಡಗಳನ್ನು ಬೆಳೆಸಲಾಗಿದೆ. ಉದ್ಯಾನದಲ್ಲಿ ವಿಹರಿಸುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ವಿವೇಕಾನಂದರ ಪ್ರತಿಮೆ ವಿರೂಪಗೊಂಡಿರುವ ಕಾರಣಕ್ಕೆ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ದಿನಗಳಲ್ಲಿ ಒಂದಿಷ್ಟು ಸರಿಪಡಿಸುವ ಕಾರ್ಯಕ್ಕೆ ಕೈ ಹಾಕಿದರೂ ವಿವೇಕಾನಂದರ ಪ್ರತಿಮೆ ಮಾತ್ರ ಇನ್ನೂ ಸುಂದರ ರೂಪ ಪಡೆದುಕೊಂಡಿಲ್ಲ. ಪ್ರತಿಮೆಯ ಸುತ್ತಲು ಗಿಡಗಂಟಿಗಳು ಬೆಳೆದು ನಿಂತಿದ್ದು, ಆದರ್ಶ ಪುರುಷನ ಸ್ಥಿತಿಕಂಡು ಪರಿತಪಿಸುವಂತಾಗಿದೆ.
ಇನ್ನೂ ಉದ್ಯಾನವನದ ಸುತ್ತಮುತ್ತಲು ಸಾರ್ವಜನಿಕರು ಕುಳಿತು ಕಾಲ ಕಳೆಯುತ್ತಾ ಸುತ್ತಮುತ್ತಲ ಪ್ರಕೃತಿ ಸೌಂದರ್ಯವನ್ನು ಸವಿಯಲಿ ಎಂಬ ಉದ್ದೇಶದಿಂದ ಪ್ರತಿಮೆಯ ಸುತ್ತ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಮೆಟ್ಟಿಲುಗಳ ಹಿಂಭಾಗದಲ್ಲಿ ಮಳಿಗೆ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮಳಿಗೆಯಂತಿರುವ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಳಿಗೆಯೊಳಗೆ ಬೆಂಕಿ ಹಾಕಿ, ಮದ್ಯದ ಪಾರ್ಟಿ ಮಾಡಿ ಅವುಗಳ ಅವಶೇಷಗಳನ್ನು ಅಲ್ಲಿಯೇ ಬಿಡಲಾಗಿದೆ.
ಸುತ್ತಲ ಪ್ರದೇಶ ಮದ್ಯದ ಬಾಟಲಿಗಳಿಂದ ತುಂಬಿ ತುಳುಕುತ್ತಿವೆ. ಕೆಲವರು ಮದ್ಯದ ಬಾಟಲಿಗಳನ್ನು ಒಡೆದು ಹಾಕಿದ್ದು, ಬಾಟಲಿ ಚೂರುಗಳು ಚಲ್ಲಾಪಿಲ್ಲಿಯಾಗಿ ಎಲ್ಲೆಂದರಲ್ಲಿ ಬಿದ್ದಿವೆ. ಇಸ್ಪೀಟ್ ಅಡ್ಡೆಯಾಗಿ ನಿರ್ಮಾಣವಾಗಿದ್ದು, ಎಲ್ಲೆಂದರಲ್ಲಿ ಇಸ್ಪೀಟ್ ಎಲೆಗಳು ಬಿದ್ದಿವೆ. ಉದ್ಯಾನವನ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಜನ ಸಂಚಾರ ವಿರಳವಾಗಿದೆ. ಕಾಲೇಜು ವಿದ್ಯಾರ್ಥಿಗಳ ಧೂಮಪಾನ ಕೇಂದ್ರವಾಗಿರುವುದಲ್ಲದೇ, ಕಾಮುಕರ ಅಡ್ಡೆಯಾಗಿ ನಿರ್ಮಾಣವಾಗಿದೆ. ಉದ್ಯಾನವನ ಆವರಣದ ಸುತ್ತಲು ನೆಟ್ಟಿರುವ ಬಿದಿರು ಗಿಡಗಳ ಬುಡದಲ್ಲಿ ಮದ್ಯದ ಬಾಟಲಿಯ ಜೊತೆಗೆ ಕೆಲ ಮತ್ತೇರಿಸುವ ಸೆಲ್ಯೂಷನ್‌ನಂತಹ ಪ್ಯಾಕ್‌ಗಳು ಕಣ್ಣಿಗೆ ರಾಚುತ್ತವೆ. ಇದರ ನಡುವೆ ಸ್ವಾಮಿ ವಿವೇಕಾನಂದರ ಪ್ರತಿಮೆ ಹಿಂಭಾಗದಲ್ಲಿ ವಾಮಾಚಾರ ನಡೆಸಿರುವ ಕುರುಹುಗಳಿವೆ.
ಒಡೆದ ಮೊಟ್ಟೆ ಚೂರು, ಅನ್ನ, ಕುಂಕುಮ, ಪ್ರಾಣಿ ಅಥವಾ ಪಕ್ಷಿ ಬಲಿ ನೀಡಿ ವಾಮಾಚಾರ ನಡೆಸಿರುವ ಕುರುಹುಗಳು ಸಿಗುತ್ತವೆ. ಯುವ ಜನತೆಯ ಆದರ್ಶ ಪುರುಷನ ಪ್ರತಿಮೆ ಸುತ್ತಮುತ್ತಲ ಪ್ರದೇಶ ಅನೈತಿಕ ಚಟುವಟಿಕೆ ತಾಣವಾಗಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ದಂಟರಮಕ್ಕಿ ಕೆರೆ ಹಾಗೂ ಕೋಟೆ ಕೆರೆ ನಗರದ ಸೌಂದರ್ಯವನ್ನು ಮೆರಗುಗೊಳಿಸುವ ಎರಡು ಸುಂದರ ಕೆರೆಗಳಾಗಬೇಕಿತ್ತು ಆದರೆ, ಕಾಯಕಲ್ಪ ಕಾಣದೇ ಪಾಳುಬಿದ್ದ ಕೆರೆಯಂತಾಗಿದ್ದು, ನಗರದ ಅಂದವನ್ನೇ ಕೆಡಿಸುತ್ತಿವೆ. ದಂಟರಮಕ್ಕಿ ಕೆರೆಯಂಗಳದಲ್ಲಿನ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪವಾಗಿರುವುದನ್ನು ಇದುವರೆಗೂ ಸರಿಪಡಿಸಿಲ್ಲ. ಇದು ಆದರ್ಶ ಪುರುಷನಿಗೆ ಮಾಡಿರುವ ಅವಮಾನ. ಉದ್ಯಾನವನ ಕೂಡ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟಿರುವುದು ಬೇಸರದ ಸಂಗತಿ.
ಗುರುದತ್, ಸ್ಥಳೀಯರು
ಪಾರ್ಕ್ ಸುತ್ತಮುತ್ತ ಮದ್ಯದ ಬಾಟಲಿಗಳೇ ತುಂಬಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟಿದೆ. ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಶೀಘ್ರದಲ್ಲಿ ಸುಂದರ ಮೂರ್ತಿಯಾಗಿ ರೂಪಿಸಬೇಕು ಮತ್ತು ಉದ್ಯಾನವನ್ನು ಅಭಿವೃದ್ಧಿಪಡಿಸಿ, ಸುತ್ತಲು ಬೇಲಿ ನಿರ್ಮಿಸಿ ಕಾವಲುಗಾರರನ್ನು ನೇಮಿಸಲು ಕ್ರಮ
ಕೈಗೊಳ್ಳಬೇಕು.
ಸಂಜಯ್, ಸ್ಥಳೀಯರು
ಸಂದೀಪ್ ಜಿ.ಎನ್. ಶೇಡಗಾರ