ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕೋವಿಡ್ ಸೋಂಕು ಶನಿವಾರ ರುದ್ರನರ್ತನ ಮಾಡಿದ್ದು ಒಂದೇ ದಿನ 8 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.
ತರೀಕೆರೆ ತಾಲೂಕಿನ ನಾಲ್ಕು ಪೊಲೀಸ್ ಸಿಬ್ಬಂದಿ, ಮಹಾರಾಷ್ಟ್ರದಿಂದ ಇತ್ತೀಚೆಗೆ ಎನ್.ಆರ್. ಪುರ ತಾಲೂಕಿಗೆ ಬಂದಿದ್ದ ಇಬ್ಬರು, ತಮಿಳುನಾಡಿನಿಂದ ಕೊಪ್ಪ ತಾಲೂಕಿಗೆ ಬಂದ ಒಬ್ಬರಿಗೆ ಹಾಗೂ ಕುವೈತ್‌ನಿಂದ ಶೃಂಗೇರಿ ತಾಲೂಕಿಗೆ ಬಂದಿದ್ದ ಒಬ್ಬರಲ್ಲಿ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದ್ದಾರೆ. ಕೋವಿಡ್ ಸೋಂಕಿತ 8 ಮಂದಿಯನ್ನು ಚಿಕ್ಕಮಗಳೂರು ನಗರದಲ್ಲಿ ತೆರೆಯಲಾಗಿರುವ ಕೋವಿಡ್-19 ಚಿಕಿತ್ಸಾ ಕೇಂದ್ರದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 16 ಕೋವಿಡ್-19 ಸಕ್ರಿಯ ಪ್ರಕರಣಗಳು ಕಂಡು ಬಂದಿವೆ ಎಂದು ತಿಳಿಸಿದ್ದಾರೆ.
23 ವರ್ಷದ ಮಹಿಳೆ ಇತ್ತೀಚೆಗೆ ಕುವೈತ್‌ನಿಂದ ಜಿಲ್ಲೆಯ ಶೃಂಗೇರಿ ತಾಲೂಕಿಗೆ ಹಿಂದಿರುಗಿದ್ದರು. 38 ವರ್ಷದ ಪುರುಷ, 54 ವರ್ಷದ ಪುರುಷ, 31 ವರ್ಷದ ಪುರುಷ, 47 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದ್ದು ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದಿಂದ ಇತ್ತೀಚೆಗೆ ಎನ್.ಆರ್. ಪುರ ತಾಲೂಕಿಗೆ ಆಗಮಿಸಿದ್ದ 18 ವರ್ಷದ ಯುವಕ, 50 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ತಮಿಳುನಾಡಿನಿಂದ ಕೊಪ್ಪ ತಾಲೂಕಿಗೆ ಆಗಮಿಸಿದ್ದ 25 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಕುವೈತ್‌ನಿಂದ ಶೃಂಗೇರಿ ಪಟ್ಟಣಕ್ಕೆ ಬಂದಿದ್ದ 23 ವರ್ಷದ ಮಹಿಳೆ ಸೇರಿದಂತೆ ನಾಲ್ವರು ಪೊಲೀಸರು ಹಾಗೂ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ತರೀಕೆರೆ ಪಟ್ಟಣದ ಡಿವೈಎಸ್‌ಪಿ ಸೇರಿದಂತೆ ನಾಲ್ಕು ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ಹೇಗೆ ತಗುಲಿದೆ ಎಂದು ಪತ್ತೆ ಹಚ್ಚಲಾಗುತ್ತಿದೆ. ತರೀಕೆರೆ ತಾಲೂಕು ಡಿವೈಎಸ್‌ಪಿ ಕಚೇರಿಯನ್ನೇ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಪೊಲೀಸರ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇಷ್ಟು ದಿನಗಳ ಕಾಲ ಹೊರ ರಾಜ್ಯದಿಂದ ಜಿಲ್ಲೆಗೆ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಕಂಡು ಬರುತ್ತಿರುವ ಕೆಲವು ಸೋಂಕಿತ ಪ್ರಕರಣಗಳು ಸ್ಥಳೀಯರದ್ದಾಗಿದ್ದು ಸೋಂಕು ಸಾಮುದಾಯಿಕವಾಗಿ ಹರಡುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ.