ಚಿಕ್ಕಮಗಳೂರು: ಜಿಲ್ಲೆಯ 6 ಮಂದಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 5 ಮಂದಿ ಹಾಗೂ ಮೂಡಿಗೆರೆ ತಾಲೂಕಿನ ಓರ್ವ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು ಸೋಂಕಿತರನ್ನು ಕೋವಿಡ್-19 ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ದೃಢಪಟ್ಟಿರುವ ಆರು ಪ್ರಕರಣಗಳಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ನರರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಮತ್ತು ಅವರ ಪತ್ನಿ ಹಾಗೂ ಎಂ.ಕೆ. ಪ್ರಾಣೇಶ್ ಅವರ ಕಾರು ಚಾಲಕ ಸೇರಿದಂತೆ ನಾಲ್ಕು ಮಂದಿಯಲ್ಲಿ ಕೋವಿಡ್ಸೋಂಕಿರುವುದು ಪ್ರಾಯೋಗಾಲಯದ ವರದಿಯಿಂದ ದೃಢಪಟ್ಟಿದೆ.
ಇನ್ನೆರೆಡು ಪ್ರಕರಣಗಳು ಚಿಕ್ಕಮಗಳೂರು ನಗರದಲ್ಲಿ ಕಂಡು ಬಂದಿದ್ದು, ಇತ್ತೀಚೆಗೆ ನಗರದ ಗೌರಿ ಕಾಲುವೆಗೆ ಬಂದಿದ್ದ ವ್ಯಕ್ತಿಯ ಸೋಂಕಿದ್ದು ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ ಹಾಗೂ ಇತ್ತೀಚೆಗೆ ಬೆಂಗಳೂರಿನಿಂದ ಚಿಕ್ಕಮಗಳೂರು ನಗರದ ಟಿಪ್ಪು ನಗರಕ್ಕೆ ಆಗಮಿಸಿದ್ದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಲ್ಲಿ ಕೋವಿಡ್ ಸೋಂಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಕಲ್ಯಾಣ ನಗರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ, ಗೌರಿ ಕಾಲುವೆ ಹಾಗೂ ಬಿಜೆಪಿ ಮುಖಂಡರ ಮನೆಗಳನ್ನು ಸೀಲ್‌ಡೌನ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಈ ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಮಂಗಳವಾರ ಕಂಡು ಬಂದ 6 ಪ್ರಕರಣಗಳು ಸೇರಿದಂತೆ ಕೋವಿಡ್ ಸೋಂಕಿತರ ಸಂಖ್ಯೆ ಒಟ್ಟು 100ಕ್ಕೇರಿದ್ದು ಇದರಲ್ಲಿ 48 ಸಕ್ರಿಯ ಪ್ರಕರಣಗಳಿವೆ. 51ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವರು ಮೃತಪಟ್ಟಿದ್ದಾರೆ.