ಚಿಕ್ಕಮಗಳೂರು: ಕೋವಿಡ್ ಮುಕ್ತ ಜಿಲ್ಲೆಯಾಗಿ ಹೊರ ಹೊಮ್ಮಿದ್ದ ಕಾಫಿ ನಾಡಿನ ಬಯಲು ಸೀಮೆ ಭಾಗದಲ್ಲೂ ಗುರುವಾರ ಕೋವಿಡ್ ಸೋಂಕು ಪತ್ತೆಯಾಗಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಪತ್ತೆಯಾಗಿದ್ದ 16 ಸೋಂಕಿತರು ಸೋಂಕು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಜಿಲ್ಲೆ ಕೋವಿಡ್ ಸೋಂಕಿನಿಂದ ಮುಕ್ತವಾಗಿತ್ತು. ಗುರುವಾರ 15 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಲ್ಲಿ ಕೋವಿಡ್ ಸೋಂಕಿರುವುದು ಪ್ರಯೋಗಾಲಯದ ವರದಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದ್ದು, ಮತ್ತೆ ಜಿಲ್ಲೆ ಕೋವಿಡ್ ತೆಕ್ಕೆಗೆ ಒಳಗಾಗುವಂತಾಗಿದೆ.
ಕಡೂರು ತಾಲೂಕಿನ ಕೆ.ದಾಸರಹಳ್ಳಿ 19ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬುಧವಾರ ರಾತ್ರಿಯೇ ಸೋಂಕಿತ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ನಗರದ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಮಂದಿಯನ್ನು ಈಗಾಗಲೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವಿದ್ಯಾರ್ಥಿಯ ಮನೆ ಸೇರಿದಂತೆ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 55 ಮಂದಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು, ವಿದ್ಯಾರ್ಥಿಗೆ ಸೋಂಕು ಹೇಗೆ ತಗುಲಿತು ಎಂಬುದರ ಪತ್ತೆಗೆ ತಂಡ ರಚಿಸಲಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರ, ದೆಹಲಿಯಿಂದ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದವರಲ್ಲಿ ಮೇ 19ರಂದು ಪ್ರಥಮ ಬಾರಿಗೆ ಸೋಂಕು ಪತ್ತೆಯಾಗಿದ್ದು, ಒಟ್ಟು 16 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿತ್ತು. ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸೋಂಕಿನಿಂದ ಗುಣಮುಖರಾಗಿದ್ದರು. ಜಿಲ್ಲೆ ಕೊರೊನಾ ಮುಕ್ತವಾಗಿತ್ತು. ಆದರೆ, ಕಡೂರು ತಾಲೂಕಿನಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಲ್ಲಿ ಆತಂಕ ಉಂಟು ಮಾಡಿದೆ.