Advertisement

ಡಿಕೆಶಿ ಬಂಧನಕ್ಕೆ ಭಾರೀ ಆಕ್ರೋಶ

02:34 PM Sep 05, 2019 | Naveen |

ಚಿಕ್ಕಮಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಬುಧವಾರ ತಾಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್‌ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಸಿಬಿಐ, ಇಡಿ ಇನ್ನಿತರೆ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ಎದುರಾಳಿಗಳನ್ನು ಮಣಿಸಲು ಅವುಗಳನ್ನು ದಾಳವನ್ನಾಗಿಸಿಕೊಂಡಿದೆ ಎಂದು ಟೀಕಿಸಿದರು.

ಮಾಜಿ ಸಚಿವ ಚಿದಂಬರಂ ಅವರನ್ನು ಬಂಧಿಸಿದ ನಂತರ ಡಿ.ಕೆ.ಶಿವಕುಮಾರ್‌ ಅವರಿಗೆ 4 ದಿನಗಳ ಕಾಲ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಿದ್ದಾರೆ. ನಂತರ ಬಂಧನಕ್ಕೆ ಒಳಪಡಿಸಲಾಗಿದೆ. ಕಮಲಕ್ಕೆ ಜೈ ಅನ್ನದವರ ವಿರುದ್ಧ ಈ ರೀತಿ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಈ ಕೂಡಲೇ ಡಿ.ಕೆ.ಶಿವಕುಮಾರ್‌ ಅವರನ್ನು ಬಿಡುಗಡೆ ಮಾಡದೇ ಇದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದಲ್ಲಿರುವವರೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ, ಇನ್ನೊಬ್ಬರ ಬಗ್ಗೆ ತನಿಖೆ ನಡೆಸಲು ಅರ್ಹತೆಯೇ ಇಲ್ಲ ಎಂದರು.

Advertisement

ಸರ್ಕಾರ ನಡೆಸುತ್ತಿರುವವರು ಈ ಬಗ್ಗೆ ಪ್ರಶ್ನೆ ಹಾಕಿಕೊಳ್ಳಬೇಕು. ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷಗಳಿಗೆ ಹಾಕುವ ಉರುಳಿನ ರೀತಿ ಬಳಸಿಕೊಳ್ಳಬಾರದು. ಹಾಗೆ ಮಾಡಿದರೆ ಅವರಿಗೆ ತಿರುಗೇಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್‌ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳನ್ನು ಬಂಧಿಸಲು ಕಾನೂನಿನ ಇತಿಮಿತಿಗಳಿವೆ. ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ವೇಳೆ ಇದ್ಯಾವುದನ್ನೂ ಅನುಸರಿಸಿಲ್ಲ ಎಂದು ದೂರಿದರು.

ಡಿ.ಕೆ.ಶಿವಕುಮಾರ್‌ ಅವರನ್ನು ಹಬ್ಬಕ್ಕೂ ಕಳುಹಿಸಿದೆ, ಅವರ ತಂದೆಯ ಸಮಾಧಿ ಪೂಜೆಗೂ ಅವಕಾಶ ಮಾಡಿಕೊಡದೆ ಅಮಾನವೀಯವಾಗಿ ವಿಚಾರಣೆ ನಡೆಸಿರುವುದು ಖಂಡನೀಯ. ಶಿವಕುಮಾರ್‌ ದೊಡ್ಡ ಹಗರಣವನ್ನೇನೂ ಮಾಡಿಲ್ಲ. ನೂರಾರು ಕೋಟಿ ರೂ. ನೀಡಿ 16 ಜನ ಶಾಸಕರನ್ನು ಖರೀದಿಸಿದವರಿಗೆ ಶಿವಕುಮಾರ್‌ ಅವರನ್ನು ಬಂಧಿಸುವಂತಹ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಸಿಪಿಐ ಮುಖಂಡ ಎಚ್.ಎಂ.ರೇಣುಕಾರಾಧ್ಯ, ಬಿ.ಅಮ್ಜದ್‌, ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಗಾಯತ್ರಿ ಶಾಂತೇಗೌಡ, ಜಿಲ್ಲಾ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ರೇಖಾ ಹುಲಿಯಪ್ಪಗೌಡ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next