ಚಿಕ್ಕಮಗಳೂರು: ಕಾಫಿನಾಡ ಕಾಂಗ್ರೆಸ್ ನಲ್ಲಿ ಮೂಲ-ವಲಸಿಗ ಕಾಂಗ್ರೆಸಿಗರ ನಡುವಿನ ಸಮರ ತೀವ್ರವಾಗಿದ್ದು, ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರ ಮಾತಿನ ಚಕಮಕಿ ನಡೆದಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಮೂಲ ಕಾಂಗ್ರೆಸ್ಸಿಗರ ಸಭೆಯಲ್ಲಿ ಅರ್ಜಿ ಹಾಕದವರ ಹೆಸರು ಯಾಕೆ ಕೇಳಿ ಬರುತ್ತಿದೆ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದು, ಅರ್ಜಿ ಹಾಕಿರುವವರ ಹೆಸರು ಹೇಳಿ, ಅವರಿಗೆ ಟಿಕೆಟ್ ಕೊಡಬೇಕು ಎಂದು ಕಾರ್ಯಕರ್ತರು ಆರ್ಭಟಿಸಿದರು.ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹೆಚ್.ಡಿ.ತಮ್ಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು.
ತಮ್ಮಯ್ಯ ಶಾಸಕ ಸಿ.ಟಿ. ರವಿ ಆಪ್ತರಾಗಿದ್ದರು.ಈ ಬಾರಿ ಚಿಕ್ಕಮಗಳೂರು ಕ್ಷೇತ್ರಕ್ಕೆ ತಮ್ಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಮೂಲ ಕಾಂಗ್ರೆಸ್ಸಿಗರು ಸಭೆ ಸೇರಿ ಆಕ್ರೋಶ ಹೊರ ಹಾಕಿದ್ದಾರೆ.
ಐದರಿಂದ ಹತ್ತು ವರ್ಷ ಪಕ್ಷದಲ್ಲಿ ದುಡಿಯಲಿ, ಆಮೇಲೆ ಅವರಿಗೆ ಟಿಕೆಟ್ ಕೊಡಲಿ. ಅರ್ಜಿ ಹಾಕಿಲ್ಲ, ಬಂದ ಕೂಡಲೇ ಟಿಕೆಟ್ ಅಂದರೆ ಹತ್ತಿಪ್ಪತ್ತು ವರ್ಷದಿಂದ ಪಕ್ಷ ಸಂಘಟನೆ ಮಾಡಿದವರು ಏನು ಮಾಡಬೇಕು ಎಂದು ಮೂಲ ಕಾಂಗ್ರೆಸ್ ಕಾರ್ಯಕರತರು ಕಿಡಿ ಕಾರಿದರು.