ಚಿಕ್ಕಮಗಳೂರು : ತಾಲೂಕಿನ ಆಲ್ದೂರು ಗ್ರಾಮದಲ್ಲಿ ಶವ ಹೂಳುವ ವೇಳೆ ಎರಡು ಸಮುದಾಯದ ನಡುವೆ ಗಲಾಟೆ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಶುಕ್ರವಾರ(ಡಿ6) ನಡೆದಿದೆ.
ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯದ ನಡುವೆ ಶವ ಹೂಳುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಗುಂಡಿಗೆ ಇಳಿದು ಒಕ್ಕಲಿಗ ಮಹಿಳೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಸ್ಥಳ ಒಕ್ಕಲಿಗರ ಸಮುದಾಯ ಭವನ ಮತ್ತು ಪರಿಶಿಷ್ಟ ಜಾತಿ ಶ್ಮಶಾನ ಜಾಗದ ವಿವಾದ ಸ್ಥಳವಾಗಿದ್ದು, ಹಲವು ದಶಕಗಳಿಂದ ವಿವಾದ ಬೂದಿ ಮುಚ್ಚಿದ ಕೆಂಡದಂತಿತ್ತು.ಇಂದು ವಿವಾದಿತ ಜಾಗಕ್ಕೆ ಶವ ಹೂಳಲೆಂದು ಪರಿಶಿಷ್ಟ ಜಾತಿ ಸಮುದಾಯದವರು ತೆರಳಿದ ವೇಳೆ ಒಕ್ಕಲಿಗರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ವಿವಾದಿತ ಜಾಗ ನ್ಯಾಯಾಲಯದಲ್ಲಿ ಇದೆ ಎಂದು ಒಕ್ಕಲಿಗರ ವಾದಿಸಿ, ಗುಂಡಿಗೆ ಇಳಿದು ಶವ ಹೂಳಲು ಒಕ್ಕಲಿಗ ಮಹಿಳೆ ಪೂರ್ಣಿಮಾ ಶ್ರೀನಿವಾಸ್ ವಿರೋಧ ವ್ಯಕ್ತ ಪಡಿಸಿದ್ದಾರೆ. ಪೂರ್ಣಿಮಾ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷೆ.
ಈ ವೇಳೆ ಮೂರ್ನಾಲ್ಕು ಮಹಿಳೆಯರು ಗುಂಡಿಯೊಳಗೆ ಇಳಿದು ಆಕ್ರೋಶ ಹೊರ ಹಾಕಿದ್ದು, ಎಲ್ಲರನ್ನು ಆಲ್ದೂರು ಪೊಲೀಸರು ಮೇಲಕ್ಕೆ ಎಳೆದು ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.